ಅವ್ಯವಸ್ಥೆಯ ಆಗರ ಹರಿಹರ ಡಿ.ಆರ್.ಎಂ. ಪ್ರೌಢಶಾಲೆ

ಅವ್ಯವಸ್ಥೆಯ ಆಗರ ಹರಿಹರ ಡಿ.ಆರ್.ಎಂ. ಪ್ರೌಢಶಾಲೆ

ಹರಿಹರ, ಜು. 10- ನಗರದ ಪ್ರಸಿದ್ಧ ಡಿ.ಆರ್.ಎಂ.  ಪ್ರೌಢಶಾಲೆಯ ಅವ್ಯವಸ್ಥೆಯಿಂದಾಗಿ ಶಾಲೆಯಲ್ಲಿ ಮಕ್ಕಳು ವಿದ್ಯಾಭ್ಯಾಸವನ್ನು ಮಾಡುವುದು ದುಸ್ತರವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. 

ನಗರದಲ್ಲಿ ಮಕ್ಕಳಿಗೆ ಓದುವುದಕ್ಕೆ ಶಾಲೆ ಇಲ್ಲದ ಸಮಯದಲ್ಲಿ ರಾಜನಹಳ್ಳಿ ಮದ್ದುರಾಯಪ್ಪನವರ ಕುಟುಂಬ ದವರು ವಿದ್ಯಾಭ್ಯಾಸಕ್ಕೆ ಉಪಕಾರ ಆಗಲಿ ಎಂದು ತಮ್ಮ ಜಮೀನನ್ನು ದಾನವಾಗಿ ನೀಡಿದ್ದರ ಪರಿಣಾಮ ನಗರದಲ್ಲಿ ಡಿ.ಆರ್.ಎಂ. ಪ್ರೌಢಶಾಲೆ ಆರಂಭವಾಗಲು ಕಾರಣವಾಯಿತು. 

ಶಾಲೆ ಆರಂಭಗೊಂಡಾಗಿನಿಂದ ಇಲ್ಲಿಯವರೆಗೆ ಈ ಶಾಲೆಯಲ್ಲಿ ಓದಿದವರು ಬಹಳಷ್ಟು ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿ ಇರುವುದನ್ನು ಕಾಣಬಹುದಾಗಿದೆ. ಜೊತೆಗೆ ಅನೇಕ ರಾಜಕೀಯ ಮುಖಂಡರು, ಹಿರಿಯ ಸಾಹಿತಿಗಳು ಸಹ ಇದೇ ಶಾಲೆಯಲ್ಲಿ ಓದಿದ್ದು ಇತಿಹಾಸ. ಆದರೆ ಇಂತಹ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಇಲ್ಲದೇ ಇರುವುದು ಶೋಚನೀಯ ಪರಿಸ್ಥಿತಿಯಾಗಿದೆ.

ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಕುಳಿತು ಪಾಠವನ್ನು ಕೇಳುವುದಕ್ಕೆ ಆಸನಗಳು ಇರುವುದಿಲ್ಲ ಮತ್ತು ಕಿಟಕಿ ಬಾಗಿ ಲುಗಳು ಮುರಿದಿದ್ದು, ಗಾಳಿ, ಬೆಳಕು ಸರಿಯಾಗಿ ಇರುವುದಿಲ್ಲ. ಕೆಲವು  ವಿದ್ಯಾರ್ಥಿಗಳು ಗುಟ್ಕಾ,  ಪಾನ್ ಪರಾಗ್ ಹಾಕಿಕೊಂಡು ಎಲ್ಲೆಂದರಲ್ಲಿ ಉಗಿಯುವುದರಿಂದ ಶಾಲಾ ಕೊಠಡಿಗಳು ಗಬ್ಬೆದ್ದು ನಾರುತ್ತಿವೆ. ವ್ಯವಸ್ಥಿತವಾದ ಶೌಚಾಲಯ ಸೌಕರ್ಯವಿಲ್ಲ, ಲ್ಯಾಬ್ ಕೊಠಡಿ, ಸ್ಪೋರ್ಟ್ಸ್ ಆಟಿಕೆಗಳು ಇರುವುದಿಲ್ಲ, ಗ್ರಂಥಾಲಯ, ಕಾಂಪೌಂಡ್ ಗೋಡೆ ಇರುವುದಿಲ್ಲ, ಹೀಗೆ ಪಟ್ಟಿಯನ್ನು ಮಾಡುತ್ತಾ ಸಾಗಿದರೆ ಸಾಕಷ್ಟು ರೀತಿಯಲ್ಲಿ ಸಮಸ್ಯೆಗಳ ಸರಮಾಲೆ ಇದ್ದು, ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ತೊಂದರೆಗಳು ಇರುವುದು ಕಂಡುಬಂದಿದೆ. 

ಡಿ.ಆರ್.ಎಂ ಪ್ರೌಢಶಾಲೆ  ಸ್ಥಿತಿಯನ್ನು ನೋಡಿದರೆ   ವಿದ್ಯಾರ್ಥಿಗಳಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಗಳು ಇದ್ದು, ಸರ್ಕಾರ ಕೂಡಲೇ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕಾಗಿದೆ.  ಶಾಲಾ ಆವರಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡುವ ಪುಂಡರ ಹಾವಳಿಯನ್ನು ನಿಯಂತ್ರಿಸುವುದಕ್ಕೆ ಪೊಲೀಸ್ ಇಲಾಖೆ  ಅಧಿಕಾರಿಗಳೂ ಸಹ ದಿನಕ್ಕೆ ಎರಡು, ಮೂರು ಬಾರಿ ಬೀಟ್ ಹಾಕಿದರೆ ಅನುಕೂಲ ಆಗುತ್ತದೆ  ಎಂದು ಶಾಲೆಯ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಶಿವಕುಮಾರ್ ಮತ್ತು ಸದಸ್ಯ ಜಬಿವುಲ್ಲಾ   ಹೇಳುತ್ತಾರೆ.

ಈ ಶಾಲೆ 1945 ರಲ್ಲಿ ಆರಂಭಗೊಂಡಿದ್ದು, ಕನ್ನಡ, ಇಂಗ್ಲಿಷ್, ಹಾಗೂ ಉರ್ದು ಮಾಧ್ಯಮ ದಲ್ಲಿ 8-9-10 ನೇ ತರಗತಿಯಲ್ಲಿ ಓದುವ 378 ವಿದ್ಯಾರ್ಥಿಗಳಿದ್ದು,  ಶಾಲಾ ಕೊಠಡಿಗಳ ಕೊರತೆ,  ಗ್ರಂಥಾಲಯ, ಆಫೀಸ್ ರೂಂ ವ್ಯವಸ್ಥೆ ಇರುವುದಿಲ್ಲ. ನಾವು ಸಾಕಷ್ಟು ಬಾರಿ ಎಲ್ಲಾ ಶಾಸಕರ ಗಮನಕ್ಕೆ ತರುವಂತಹ ಕೆಲಸವನ್ನು ಮಾಡಿದ್ದು, ಇದುವರೆಗೂ ಯಾವುದೇ ರೀತಿಯ ಪ್ರಯೋಜನ ಆಗಿರುವುದಿಲ್ಲ. ಹಿರಿಯ ವಿದ್ಯಾರ್ಥಿಗಳು ಮಾಡುವ ಅಚಾತುರ್ಯಗಳಿಗೆ ಕಡಿವಾಣ ಹಾಕಿದ್ದು,  ಈಗ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದೆ ಎಂದು ಶಿಕ್ಷಕ ಈಶಪ್ಪ ಬೂದಿಹಾಳ ತಿಳಿಸಿದರು.


– ಎಂ.ಚಿದಾನಂದ ಕಂಚಿಕೇರಿ

error: Content is protected !!