ಏಕರೂಪ ನಾಗರಿಕ ಸಂಹಿತೆ ಚರ್ಚೆ ಕೈಬಿಡಲು ಒತ್ತಾಯಿಸಿ ಮನವಿ

ಏಕರೂಪ ನಾಗರಿಕ ಸಂಹಿತೆ ಚರ್ಚೆ ಕೈಬಿಡಲು ಒತ್ತಾಯಿಸಿ ಮನವಿ

ದಾವಣಗೆರೆ, ಜು.10- ಏಕರೂಪ ನಾಗರಿಕ ಸಂಹಿತೆಯ ಚರ್ಚೆಯ ವಿಚಾರವನ್ನು ಕಾನೂನು ಆಯೋಗವು ಕೈಬಿಡುವಂತೆ ಆದೇಶಿಸಲು ಒತ್ತಾಯಿಸಿ ಮುಸ್ಲಿಂ ಒಕ್ಕೂಟದ ಸದಸ್ಯರು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಮುಸ್ಲಿಂ ಒಕ್ಕೂಟದ ಸಂಚಾಲಕ ನಜೀರ್ ಅಹಮದ್ ಮಾತನಾಡಿ, ಏಕರೂಪ ನಾಗರಿಕ ಸಂಹಿತೆ ಭಾರತದ ನಾಗರಿಕರಿಗೆ ನೀಡಿರುವ ಮೂಲಭೂತ ಹಕ್ಕನ್ನು ಮೊಟಕುಗೊಳಿಸುತ್ತದೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ತನ್ನಿಚ್ಛೆಯಂತೆ, ತನಗೆ ಇಷ್ಟವಾದ ಧರ್ಮದ ಪ್ರಕಾರ ಬದುಕಲು ಸಂವಿಧಾನ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಸಂವಿಧಾನ ವಿರೋಧಿಯಾಗಿದೆ ಎಂದರು.

ಭಾರತದಲ್ಲಿ ಬುಡಕಟ್ಟು ಜನಾಂಗದವರು, ಮುಸಲ್ಮಾನರು, ಬೌದ್ಧರು, ಜೈನರು, ಸಿಖ್ಖರು ಸೇರಿದಂತೆ ಅನೇಕ ಜನಾಂಗದವರಿದ್ದಾರೆ. ಪ್ರತಿಯೊಬ್ಬರೂ ಸಹ ಅವರವರ ಧರ್ಮಾಚರಣೆಗಳನ್ನು ಪಾಲನೆ ಮಾಡುತ್ತಿದ್ದಾರೆ. 

ಭಾರತದಲ್ಲಿ ಪ್ರತಿಯೊಬ್ಬ ನಾಗರಿಕರನೂ ಧಾರ್ಮಿಕ ಮೌಲ್ಯಗಳನ್ನು ತನ್ನಲ್ಲಿ ರೂಢಿಸಿಕೊಂಡು ಜೀವನ ನಡೆಸಲು ಭಾರತ ಸಂವಿಧಾನ ಹಕ್ಕನ್ನು ನೀಡಿದೆ. ಆದರೆ ಏಕರೂಪ ನಾಗರಿಕ ಸಂಹಿತೆಯಿಂದ ದೇಶದ ಸಮಗ್ರತೆ, ಐಕ್ಯತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಇದನ್ನು ವಿರೋಧಿಸುತ್ತೇವೆ ಎಂದು ಹೇಳಿದರು.

ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಏಕರೂಪ ನಾಗರಿಕ ಸಂಹಿತೆಯ ವಿಷಯವನ್ನು ಕೈಬಿಡಲು ಕಾನೂನು ಆಯೋಗಕ್ಕೆ ಆದೇಶಿಸಲು ಮನವಿ ಮಾಡಿದರು.

ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮುಖಂಡರಾದ ಟಿ. ಅಸ್ಗರ್, ನೂರ್ ಅಹ್ಮದ್, ಮಹಮ್ಮದ್ ಶೋಯೇಬ್, ಐ.ಕೆ. ಮುನ್ನಾಸಾಬ್, ಮೆಹಬೂಬ್ ಬೀಡ, ಅನ್ವರ್ ಹುಸೇನ್, ಅಜ್ಮತ್, ಖಲೀಲ್‌ವುಲ್ಲಾ ಖಾನ್, ಪಿ.ನಬೀಸಾಬ್, ಮಹಮ್ಮದ್ ಹನೀಫ್ ಸಾಬ್, ಹಸೇನ್ ಅಂಬ್ಯುಲೆನ್ಸ್, ಮಹಮ್ಮದ್ ಫಾರೂಖ್, ಅಬ್ದುಲ್ ರೆಹಮಾನ್ ಸಾಬ್, ಸಮೀವುಲ್ಲಾ ಸಾಬ್, ಸೈಯದ್ ಅಕ್ಬರ್, ಸೈಯದ್ ಮುಸ್ತಾಫ್ ಮತ್ತಿತರರು ಇದ್ದರು.

error: Content is protected !!