ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಬಿ.ಸಿ. ಉಮಾಪತಿ
ದಾವಣಗೆರೆ, ಜು. 10- ಮಕ್ಕಳ ವಿದ್ಯಾಭ್ಯಾಸಕ್ಕೆ ಇಂದಿನ ಪೋಷಕರು ಎಲ್ಲಾ ರೀತಿಯ ಸಹಕಾರದ ಜೊತೆಗೆ ಎಲ್ಲಾ ತ್ಯಾಗಕ್ಕೂ ಸಿದ್ಧರಿರುತ್ತಾರೆ ಎಂದು ಜವಳಿ ವರ್ತಕ ಬಿ.ಸಿ. ಉಮಾಪತಿ ನುಡಿದರು.
ನಗರದ ಬಸವರಾಜ ಪೇಟೆಯ ಶ್ರೀ ಬಸವೇಶ್ವರ ಮತ್ತು ಶ್ರೀ ವೀರೇಶ್ವರ ದೇವಸ್ಥಾನ ಸಮಿತಿಯವರು ಏರ್ಪಡಿಸಿದ್ದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಕಲಿಯದಿದ್ದರೆ ಏನಂತೆ ಮಕ್ಕಳಾದರೂ ಓದಲಿ ಎಂಬ ಪೋಷಕರ ಮನೋಭಾವವನ್ನು ಮಕ್ಕಳು ಅರಿತು ತಂದೆ- ತಾಯಿಯರನ್ನು ದೇವರಂತೆ ಕಾಣಬೇಕೆಂದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ವಿದ್ಯಾಭ್ಯಾಸದ ನಂತರ ನಿಮ್ಮ ಗುರಿ ಕೆಲಸದ ಕಡೆ ಇರಬೇಕು. ಉನ್ನತ ಹುದ್ದೆಯತ್ತ ಕನಸು ಕಂಡು ನನಸು ಮಾಡಿಕೊಳ್ಳುವುದರ ಮೂಲಕ ಪೋಷಕರನ್ನು ಪೋಷಿಸಬೇಕು. ಅಂದಾಗ ಮಾತ್ರ ನಿಮ್ಮ ಕಲಿಕೆ ಸಾರ್ಥಕವಾಗುತ್ತದೆ. ಇಂದಿನ ಮಕ್ಕಳು ಪುಣ್ಯವಂತರು, ಭಾಗ್ಯವಂತರು. ನಿಮ್ಮ ಓದಿಗೆ ಪೋಷಕರು ಎಷ್ಟೇ ತೊಂದರೆ, ತಾಪತ್ರಯ ಇದ್ದರೂ ಕೂಡ ಸಾಲ ಮಾಡಿಯಾದರೂ ಓದಿಸುತ್ತಾರೆ. ನೀವುಗಳು ಮೊಬೈಲ್ ದಾಸರಾಗದೆ, ಸರ್ಕಾರಿ ಸೀಟು ಪಡೆಯುವಂತಹ ಚಿತ್ತ ಬೆಳೆಸಿಕೊಳ್ಳಬೇಕೆಂದರು.
ಹಿಂದೆ ನಮಗೆ ಓದಲು ಸಹಾಯ- ಸಹಕಾರವಿರಲಿಲ್ಲ. ಫೀಸ್ ಕಟ್ಟಲು ಪೋಷಕರು ಪೇಚಾಡುತ್ತಿದ್ದರು. ಓದಲು ಬೆಳಕೂ ಸಹ ಇರಲಿಲ್ಲ. ಇಂದು ನಿಮಗೆ ಎಲ್ಲವೂ ಇದೆ. ಆದ್ದರಿಂದ ಓದಿನ ಜೊತೆಗೆ ಸಂಸ್ಕಾರವಂತರಾಗಬೇಕು. ಅಧ್ಯಾತ್ಮಿಕತೆ ಯನ್ನು ಅಳವಡಿಸಿಕೊಂಡು ಬೆಳೆಯಬೇಕೆಂದರು.
ಕಾರ್ಮಿಕರು ಮತ್ತು ಶ್ರಮಜೀವಿಗಳೇ ಹೆಚ್ಚಾಗಿರುವ ಬಸವರಾಜಪೇಟೆಯಲ್ಲೊಂದು ಕಲ್ಯಾಣ ಮಂಟಪದ ಅವಶ್ಯಕತೆ ಇದೆ ಎಂಬ ಬೇಡಿಕೆಗೆ ಸ್ಪಂದಿಸಿದ ಉಮಾಪತಿಯವರು, ಇದಕ್ಕೆ ತಮ್ಮ ಸಹಕಾರವೂ ಇದೆ ಎಂದು ಭರವಸೆ ನೀಡಿದರು.
ರೈಸ್ ಮಿಲ್ ವರ್ತಕ ಜಿ.ಎಸ್. ಉಳುವಯ್ಯ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ವೈ. ಬಿ. ಸತೀಶ್, ಶ್ರೀ ಮಂಜು ಪೇಂಟ್ಸ್ನ ಅಂದನೂರು ಮುರುಗೇಶಪ್ಪ, ಶ್ರೀಶೈಲ ಮಲ್ಲಿಕಾರ್ಜುನ ಟ್ರೇಡರ್ಸ್ ನ ಮಾಲೀಕ ಹೆಚ್. ಎನ್. ನಾಗರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಪ್ಪ ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಬಸವೇಶ್ವರ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಬಿ. ಎಸ್. ಉಮಾ ಅವರನ್ನು ಸನ್ಮಾನಿಸಿದರು.
ಚಿ. ಸಮರ್ಥ್ ಪ್ರಾರ್ಥಿಸಿದರು ಎ.ಬಿ. ಸಿದ್ಧಲಿಂಗೇಶ್ ಸ್ವಾಗತಿಸಿದರು. ನಂತರ ಉಪಾಧ್ಯಕ್ಷ ಇಂದಿನ ಸುದ್ದಿ ಸಂಪಾದಕ ವೀರಪ್ಪ. ಎಂ. ಬಾವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಂಭುಲಿಂಗಪ್ಪ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಎಂ. ದೊಡ್ಡಪ್ಪ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.