ಜನಪದ ಕಲೆಗಳೇ ಗ್ರಾಮೀಣರ ಜೀವಾಳ

ಜನಪದ ಕಲೆಗಳೇ ಗ್ರಾಮೀಣರ ಜೀವಾಳ

ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್‍ಕುಮಾರ್

ದಾವಣಗೆರೆ, ಜು. 9 – ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರು ಇದ್ದಂತೆ. ಜನ ಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿವೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್‍ಕುಮಾರ್ ಅಭಿಪ್ರಾಯಪಟ್ಟರು.

ಶ್ರೀ ಬಸವೇಶ್ವರ ಗ್ರಾಮೀಣ ಸಾಂಸ್ಕೃತಿಕ ಕಲಾ ವೇದಿಕೆ (ಎಲೆಬೇತೂರು), ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಬೆಂಗಳೂರು) ಇವರ ಸಂಯುಕ್ತ ಆಶ್ರಯದಲ್ಲಿ ಬಸಾಪುರದ ಆರಾಧ್ಯ ಬಡಾವಣೆಯಲ್ಲಿನ ಶ್ರೀ ರೇವಣಸಿದ್ದೇಶ್ವರ ಪ್ರೌಢಶಾಲೆ ಮತ್ತು ಶ್ರೀಮತಿ ನಾಗಮ್ಮ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಚಾರ ಗೋಷ್ಠಿ ಮತ್ತು ಬಯಲಾಟ ಪ್ರದರ್ಶನದ ಉದ್ಘಾಟನೆ ನೆರವೇರಿಸಿ  ಅವರು ಮಾತನಾಡಿದರು.

ಆಧುನಿಕತೆಯ ಗಾಢ ಪ್ರಭಾವದಿಂದ ನಮ್ಮ ಶ್ರೀಮಂತ ಜನಪದ ಕಲಾಪ್ರಕಾರಗಳು ನಶಿಸುತ್ತಿವೆ. ನಮ್ಮ ಜೊತೆ ಬದುಕುತ್ತಿರುವ ಕಲಾವಿದರನ್ನು ಕಡೆಗಣಿಸುವ ಸಂಪ್ರದಾಯ ಬೆಳೆಯುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ರೇವಣಸಿದ್ದೇಶ್ವರ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್.ನಾಗರಾಜು ಮೆಳ್ಳೇಕಟ್ಟೆ ಮಾತನಾಡಿ, ಜನಪದ ಪ್ರದರ್ಶನಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡೆಯಬೇಕು. ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಆಸಕ್ತಿ ಹೆಚ್ಚುವಂತೆ ಅರಿವು ಮೂಡಿಸಬೇಕು. ಅಲ್ಲದೇ ಈ ಕಲೆಗಳ ಬಗ್ಗೆ ಹೆಚ್ಚು ಗೌರವ ಬೆಳೆಯುವಂತೆ ಕಲಾವಿ ದರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ತಿಳಿಸಿದರು.

ಕರ್ನಾಟಕ ಬಯಲಾಟ ಅಕಾಡೆಮಿಯ ಮಾಜಿ ಸದಸ್ಯ ಹೆಚ್.ತಿಪ್ಪೇಸ್ವಾಮಿ ಬಯಲಾಟದ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು. 

ಕಾರ್ಯಕ್ರಮದಲ್ಲಿ ರೇವಣಸಿದ್ದೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ಜಿ.ಸೌಭಾಗ್ಯಮ್ಮ, ವಕೀಲ ಆರ್.ಯೋಗೀಶ್ವರಪ್ಪ, ಹವ್ಯಾಸಿ ಗ್ರಾಮೀಣ ವಿವಿಧ ಕಲಾವಿದರ ಒಕ್ಕೂಟದ ಅಧ್ಯಕ್ಷ ಎನ್.ಎಸ್.ರಾಜು, ಬಸವೇಶ್ವರ ಗ್ರಾಮೀಣ ಕಲಾ ವೇದಿಕೆಯ ಅಧ್ಯಕ್ಷ ಎನ್.ಎ.ವೀರಭದ್ರಯ್ಯ, ಕಾರ್ಯದರ್ಶಿ ನೀರ್ಥ ಡಿ ಬಸವರಾಜಪ್ಪ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪರಮೇಶ್ವರಪ್ಪ ಸಿರಿಗೆರೆ, ಸಿ.ಹೊನ್ನೂರು ಸ್ವಾಮಿ ಇತರರು ಇದ್ದರು. 

ಕಾರ್ಯಕ್ರಮದಲ್ಲಿ ಬಯಲಾಟ ಪ್ರದರ್ಶನ, ತೊಗಲು ಬೊಂಬೆಯಾಟದ ಪ್ರದರ್ಶನ ನಡೆಯಿತು.

error: Content is protected !!