ಕಾಂಗ್ರೆಸ್ ಪಕ್ಷ ಲಂಬಾಣಿ ಸಮುದಾಯವನ್ನು ಗೌರವಯುತವಾಗಿ ನಡೆಸಿಕೊಂಡಿದೆ

ಕಾಂಗ್ರೆಸ್ ಪಕ್ಷ ಲಂಬಾಣಿ ಸಮುದಾಯವನ್ನು ಗೌರವಯುತವಾಗಿ ನಡೆಸಿಕೊಂಡಿದೆ

ಹೊನ್ನಾಳಿ : ಅಭಿನಂದನಾ ಸಮಾರಂಭದಲ್ಲಿ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ

ಹೊನ್ನಾಳಿ, ಜು. 9-  ಕಾಂಗ್ರೆಸ್ ಪಕ್ಷವು ಲಂಬಾಣಿ ಸಮುದಾಯವನ್ನು ಗೌರವಯುತವಾಗಿ ನಡೆಸಿಕೊಂಡಿದೆ ಎನ್ನುವುದಕ್ಕೆ ನಾನೇ ಅತ್ಯುತ್ತಮ ಉದಾಹರಣೆ ಎಂದು ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಹೊನ್ನಾಳಿ-ನ್ಯಾಮತಿ ತಾಲ್ಲೂಕುಗಳ ಬಂಜಾರ ಸಮಾಜದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮತ್ತು ಅಭಿಮಾನಿ ಬಳಗದ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧನಾಗಿದ್ದು, ಹುದ್ದೆಯನ್ನು ತಿರಸ್ಕರಿಸಿದ್ದೆ, ನಂತರ ಪಕ್ಷದ ವರಿಷ್ಠರ ಒತ್ತಾಯದ ಮೇರೆಗೆ ಉಪಸಭಾಪತಿ ಸ್ಥಾನವನ್ನು ಒಪ್ಪಿಕೊಂಡಿದ್ದೇನೆ ಎಂದು ಅವರು ತಿಳಿಸಿದರು.  

ಕಾಂಗ್ರೆಸ್ ಪಕ್ಷ ಮಾತ್ರವೇ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯದಡಿ ಅವಕಾಶಗಳನ್ನು ಕೊಡುವುದರ ಜೊತೆಗೆ ಅಂಬೇಡ್ಕರ್ ತತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬಂತೆ ನಡೆದುಕೊಳ್ಳುತ್ತದೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ ಎಂದು ತಿಳಿಸಿದರು.

ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಮಹತ್ವಾಕಾಂಕ್ಷಿ ಯೋಜನೆ ಕಾಂಗ್ರೆಸ್ ಸರ್ಕಾರದ್ದಾಗಿದ್ದು, ನಮ್ಮದೇ ಯೋಜನೆಯ ಬೋರ್ಡ್ ಬಳಸಿಕೊಂಡು ಸರ್ಟಿಫಿಕೇಟ್ ಕೊಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಂದಾಗಿದ್ದರೂ ಯಶಸ್ಸು ಪಡೆಯಲು ವಿಫಲರಾದರು ಎಂದು ವ್ಯಂಗ್ಯವಾಡಿದರು.

ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ನನ್ನ ಸಹೋದರನಂತಿರುವ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ಸಿಗದ ಸಂದರ್ಭದಲ್ಲಿ ಸಮಾಜದ ಸ್ವಾರ್ಥ ಜನಾಂಗಕ್ಕೆ ಮಂತ್ರಿಸ್ಥಾನ ಸಿಗಲಿಲ್ಲ ಎನ್ನುವುದಾದರೆ, ನನ್ನ ಸ್ವಾರ್ಥ ಸೂರಗೊಂಡನಕೊಪ್ಪದ ಸಮಾರಂಭದಲ್ಲಿ ಸೇರುವ ಜನಸ್ತೋಮಕ್ಕೆ ಏನು ಉತ್ತರ ಹೇಳಲಿ ಎಂಬ ಕಾತುರದ ಸ್ವಾರ್ಥ ನನ್ನದಾಗಿತ್ತು ಎಂದರು.

ರುದ್ರಪ್ಪನವರಿಗೆ ಸಿಕ್ಕಿರುವ ಸ್ಥಾನದ ಮಹತ್ವ ಅವರಿಗೂ-ನಮಗೂ ತಿಳಿದಿರಲಿಲ್ಲ. ಅದನ್ನು ಬಲ್ಲವರಿಂದ ತಿಳಿದು 34 ಜನ ಕ್ಯಾಬಿನೆಟ್ ದರ್ಜೆ ಸಚಿವರಲ್ಲಿ 32  ಸಚಿವರ ಮೇಲೆ ನೀವು ಇರುತ್ತೀರಿ, ಅವರನ್ನೊಳಗೊಂಡಂತೆ  ಸಿಎಂ ರವರನ್ನು ನೀವಿದ್ದ ಕ್ಷೇತ್ರಕ್ಕೆ ಕರೆಸಿಕೊಳ್ಳಬಹುದೆಂಬ ಸ್ಥಾನದ ಪಾವಿತ್ರ್ಯತೆ ತಿಳಿದು ಹುದ್ದೆಯನ್ನು ಅನಿವಾರ್ಯವಾಗಿ ಒಪ್ಪಿಕೊಂಡ ಸಂದರ್ಭವನ್ನು ಶಾಂತನಗೌಡ ವಿವರಿಸಿದರು.

ದಾವಣಗೆರೆಯ ವಕೀಲ ಎನ್. ಜಯದೇವನಾಯ್ಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಭಿನಂದನಾ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಕೆಪಿಸಿಸಿ ಸದಸ್ಯ ಡಾ.ಎಲ್.ಈಶ್ವರ್ ನಾಯ್ಕ್, ಹೊನ್ನಾಳಿ ಬ್ಲಾಕ್ ಮತ್ತು ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಚ್.ಬಿ.ಶಿವಯೋಗಿ, ಆರ್.ನಾಗಪ್ಪ, ಜಿ.ಪಂ. ಮಾಜಿ ಸದಸ್ಯ ಎಂ.ಆರ್.ಮಹೇಶ್, ಬಂಜಾರ ಸಮಾಜದ ಅಧ್ಯಕ್ಷ ರುಗಳಾದ ಅಂಜುನಾಯ್ಕ್, ಸೂರ್ಯಾ ನಾಯ್ಕ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ಎಸ್.ರಂಜಿತ್, ಕಾಂಗ್ರೆಸ್ ಮುಖಂಡರು ಗಳಾದ ಬಿ.ಸಿದ್ದಪ್ಪ, ಎಚ್.ಎ.ಉಮಾಪತಿ, ನುಚ್ಚಿನ್ ವಾಗೀಶ್, ಚೀಲೂರ್ ವಾಜಿದ್, ವಕೀಲ ಜಯದೇವನಾಯ್ಕ್, ರಾಘವೇಂದ್ರ ನಾಯ್ಕ್, ದೂದ್ಯಾನಾಯ್ಕ್, ಚೌಹಾಣ್, ವಸಂತನಾಯ್ಕ್, ಪೀರ್ಯಾನಾಯ್ಕ್, ಶಿವರಾಂ ನಾಯ್ಕ್, ಅರಕೆರೆ ಮಧುಗೌಡ, ರಾಘವೇಂದ್ರನಾಯ್ಕ್, ಪ್ರಭುದೇವನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!