ಶಾಂತಿ ಎಂಬ ಶ್ರೇಣಿಯಿಂದ ಗಣಿತದಲ್ಲಿ ಪಾಸಾದಾಗ ಮುಕ್ತಿಯೆಂಬ ರ‍್ಯಾಂಕ್‌ ದೊರಕುತ್ತದೆ

ಶಾಂತಿ ಎಂಬ ಶ್ರೇಣಿಯಿಂದ ಗಣಿತದಲ್ಲಿ ಪಾಸಾದಾಗ ಮುಕ್ತಿಯೆಂಬ ರ‍್ಯಾಂಕ್‌  ದೊರಕುತ್ತದೆ

ಇಂದು ಆಧುನಿಕ ಜಗತ್ತಿನಲ್ಲಿ ಅತಿಯಾದ ತಂತ್ರಜ್ಞಾನದ ಬಳಕೆಯಿಂದಾಗಿ ಮನುಷ್ಯನ ಮನಸ್ಸಿಗೆ ನೆಮ್ಮದಿ ಸಿಗದಂತಾಗಿದೆ. ಜೀವನವೆಂಬುವುದು ಗಣಿತವಿದ್ದಂತೆ, ಒಳ್ಳೆಯ ಗುಣಗಳೆಂಬ ಅಂಕಿಗೆ ಸಾತ್ವಿಕ ಗುಣವೆಂಬ ಅಂಕಿಯನ್ನು ಕೂಡಿಸಬೇಕು, ಕೆಟ್ಟ ಗುಣಗಳೆಂಬ ಅಂಕಿಯನ್ನು ಕಳೆಯಬೇಕು, ಸಂಸ್ಕಾರವೆಂಬ ಅಂಕಿಯನ್ನು ಗುಣಿಸುತ್ತಾ ಹೋಗಿ ದುರ್ಗುಣಗಳನ್ನು ಭಾಗಿಸಿ, ಉಳಿಯುವ ಶೇಷವೇ ಧರ್ಮಗುಣ.

– ಗುರು ನಾಗರಾಜಾನಂದ ಸ್ವಾಮೀಜಿ, ಖಂಡೇರಾಯನಹಳ್ಳಿ

ರಾಣೇಬೆನ್ನೂರು, ಜು.9- ತಾಯಿ ಸ್ವರೂಪಿಯಾದ ಗುರು ಕರುಣೆ ಇಲ್ಲದೇ ಯಾವ ಮಾನವನು ಸದ್ಗತಿಯನ್ನು ಹೊಂದಲು ಸಾಧ್ಯವಿಲ್ಲ. ಅಂತಪ್ಪ ಗುರುವಿನ ಮಾರ್ಗದರ್ಶನ ಪಡೆದು, ಶಾಶ್ವತ ಸುಖವನ್ನು ಪಡೆಯಬೇಕು ಎಂದು ಗುರು ನಾಗರಾಜಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸುಕ್ಷೇತ್ರ ಖಂಡೇರಾಯನಹಳ್ಳಿಯ ಶ್ರೀ ಸಿದ್ಧಾಶ್ರಮದಲ್ಲಿ ಶನಿವಾರ ರಾತ್ರಿ ಗುರು ಪೂರ್ಣಿಮೆಯ ಅಂಗವಾಗಿ ಶ್ರೀಮಠದ ಭಕ್ತರ ವತಿಯಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಶ್ರೀಗಳು ಆಶೀರ್ವಾದ ನೀಡಿದರು.

ಗುರುವಿನ ಮಾರ್ಗದರ್ಶನವಿಲ್ಲದೇ ಜೀವನವಿಲ್ಲ. ಸುಂದರ ಬದುಕು ರೂಪಿಸಿಕೊಳ್ಳಲು ಗುರು ಬೇಕು, ಆತನ ಕಾರುಣ್ಯದಿಂದ ಮಾತ್ರ ಬದುಕು ಬೆಳಕಾಗಲು ಸಾಧ್ಯ. ಗುರು ಎಂದರೆ ಅಜ್ಞಾನದಿಂದ ಸುಜ್ಞಾನದೆಡೆಗೆ ಜನರನ್ನು ಕೊಂಡೊಯ್ಯುವುದೇ ಆಗಿದೆ ಎಂದು ನುಡಿದರು.

ಈ ಭೂಮಿಯ ಮೇಲಿರುವ 84 ಲಕ್ಷ ಜೀವರಾಶಿಗಳಲ್ಲಿ `ಚಿಂತನ ಮಂಥನ’ ಮಾಡುವ ಏಕೈಕ ಜೀವಿಯಾಗಿರುವ ಮಾನವನು ಜೀವನದುದ್ದಕ್ಕೂ ಸತ್ಯ, ಪ್ರಾಮಾಣಿಕ, ನ್ಯಾಯ, ನೀತಿಯ ದಾರಿಯಲ್ಲಿಯೇ ಸಾಗಿ ಉತ್ತಮ ಬದುಕು ಸಾಗಿಸಬೇಕು. ಅನೇಕ ಮನುಷ್ಯರು ತಮ್ಮ ಜೀವಿತಾವಧಿಯಲ್ಲಿ ಮಾಡಬಾರದ್ದನ್ನು ಮಾಡಿ ಇಹಲೋಕ ತ್ಯಜಿಸುತ್ತಾರೆ. ಕೆಲವರು ಬದುಕಿದಂತೆ ಅವರ ಅನುಪಮ ಸೇವೆ ಬಿಟ್ಟು ಹೋಗುತ್ತಾರೆ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಬೆಳೆಸಿಕೊಳ್ಳಬೇಕು. 

ದಾರ್ಶನಿಕರು ಬಾಹ್ಯದ ಬದಲು ಆಂತರಿಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, ಜೀವನ ನವನವೀನವಾಗಬೇಕು. ಅದಕ್ಕಾಗಿ ಅಧ್ಯಾತ್ಮಕತೆಯತ್ತ ದೃಷ್ಟಿ ಹರಿಸಬೇಕು ಎಂದು ಶ್ರೀಗಳು ಹೇಳಿದರು. 

ಸಂಸ್ಕಾರ ಗರ್ಭಧಾರಣೆಯಿಂದ ಹಿಡಿದು ಭೂಗರ್ಭಕ್ಕೆ ಹೋಗುವತನಕ ಇರಬೇಕು. ಪ್ರಾಣಿ, ಪಕ್ಷಿಗಳಲ್ಲಿ ನಾವು ಸಂಸ್ಕಾರವನ್ನು ಕಾಣುತ್ತೇವೆ. 

ಆದರೆ ಅರಿವಿನ ಜನ್ಮ ತಾಳಿದ ಮನುಷ್ಯ ಸಂಸ್ಕಾರದಿಂದ ವಂಚಿತನಾಗಬಾರದು. ಬೇಕು, ಬೇಕು ಎನ್ನುವ ಅಂಕಿಯನ್ನು ಕೂಡಿಸುತ್ತಾ ಹೋದರೆ ದುಃಖವೇ ಪ್ರಾಪ್ತಿಯಾಗುತ್ತದೆ. ದುಃಖದಿಂದ ಮುಕ್ತಿ ಪಡೆಯಬೇಕಾದರೆ, ಬೇಕು ಎಂಬ ಅಂಕಿಯನ್ನು ಕಳೆದು ಸಾಕು ಎಂಬ ಅಂಕಿಯನ್ನು ಕೂಡಿಸಿದಾಗ ಲೆಕ್ಕ ಪರಿಪೂರ್ಣವಾಗುತ್ತದೆ. ಆಗ ಶಾಂತಿ ಎಂಬ ಶ್ರೇಣಿಯಿಂದ ಗಣಿತದಲ್ಲಿ ಪಾಸಾಗಿ ಮುಕ್ತಿಯೆಂಬ ರಾಂಕ್ ದೊರಕುತ್ತದೆ. ಇದುವೇ ಜೀವನದ ಲೆಕ್ಕವಾಗಿದೆ ಎಂದು ಶ್ರೀಗಳು ನುಡಿದರು.

ಈ ಸಂದರ್ಭದಲ್ಲಿ ಶ್ರೀಮಠದ ಭಕ್ತರು ಗುರು ನಾಗರಾಜಾನಂದ ಸ್ವಾಮೀಜಿಗಳವರಿಗೆ ಕಿರೀಟ ತೊಡಿಸಿ ಪಾದ ಪೂಜೆ  ಹಾಗೂ ವಿವಿಧ ಹೂವುಗಳ ಮಳೆಗರೆದು ಮತ್ತು ಫಲ-ಪುಷ್ಪ ಹಾಗೂ ಮಹಾಮಂಗಳಾರತಿಯೊಂದಿಗೆ ಗುರು ನಮನ ಸಲ್ಲಿಸಿದರು.  

ಶ್ರೀಮಠದ ಅಧ್ಯಕ್ಷ ಫಕ್ಕೀರಪ್ಪ ಗೌಡ್ರ, ಜನಾರ್ಧನ ಕಡೂರ, ಗೋಪಾಲ ಕೊಡ್ಲೇರ, ಡಾಕೇಶ್ ಲಮಾಣಿ, ಶಿವಣ್ಣ ಬಣಕಾರ, ಗುಡ್ಡಪ್ಪ ಹೆಡಿಯಾಲ, ಪ್ರಕಾಶ್ ಚನ್ನಗೌಡ್ರ, ಗುರುಶಾಂತಪ್ಪ ಬಾಗಿಲದವರ, ಜಯಪ್ಪ ನೆಲಹೊನ್ನಿ, ಮೈಲಾರೆಪ್ಪ ಸೋಮಲಾಪುರ, ಬಸವರಾಜ ಕಮಲಾಪುರ, ಬೀರೇಶ್ ಹರಿಹರ, ಆಕಾಶ ಗೌಡ್ರ, ಶಾಂತಮ್ಮ ಬಾಗಿಲದವರ, ಗಂಗಮಾಳವ್ವ ಹೆಡಿಯಾಲ, ಮಂಜುಳಾ ಗೌಡ್ರ, ಸುಮಾ ಚನ್ನಗೌಡ್ರ, ಶಾಂತಾ ಹೊಸಕುರುಬರ  ಸೇರಿದಂತೆ ನೂರಾರು ಮಹಿಳೆಯರು, ಮಕ್ಕಳು ಇದ್ದರು.

error: Content is protected !!