ಹೊನ್ನಾಳಿ : ಕಾನೂನಿನ ಚೌಕಟ್ಟಿನಲ್ಲಿ ಸಾಗುವಳಿದಾರರಿಗೆ ಹಕ್ಕುಪತ್ರವಿಲ್ಲ ಮತ್ತು 100 ಜಾನುವಾರುಗಳಿಗೆ ಮೇಯಲು 30 ಎಕರೆ ಜಾಗವಿಲ್ಲ
ಹೊನ್ನಾಳಿ, ಜು.6- ತಾಲ್ಲೂಕಿನ ಅರಬಗಟ್ಟೆ ಗ್ರಾಮದಲ್ಲಿ ಕುರಿಗಾಹಿಗಳು ಮತ್ತು ಗೋಮಾಳ ಜಾಗದಲ್ಲಿ ಉಳುಮೆ ಮಾಡಿರುವ ರೈತರ ನಡುವೆ ಬಸವೇಶ್ವರ ದೇವಸ್ಥಾನದ ಬಳಿ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿರುವ ಘಟನೆ ಜರುಗಿದೆ.
ಸರ್ವೇ ನಂ.111, 104 ಮತ್ತು 113 ರಲ್ಲಿ ಸುಮಾರು 200 ಎಕರೆಗೂ ಹೆಚ್ಚಿನ ವಿಸ್ತೀರ್ಣದ ಗೋಮಾಳ ಜಾಗವಿದ್ದು, ಇಲ್ಲಿ ರೈತರು 1978 ರಿಂದಲೂ ಸಾಗುವಳಿ ಮಾಡುತ್ತಿದ್ದಾರೆ. ಗೋಮಾಳ ಜಾಗದಲ್ಲಿ ಈ ಹಿಂದೆ ಅಕ್ರಮ-ಸಕ್ರಮದಡಿ ಫಾರಂ ನಂ.53 ರಲ್ಲಿ ಅರ್ಜಿ ಸಲ್ಲಿಸಿದ್ದರೂ ಈ ಹಿಂದೆ ಸುದೀರ್ಘ ಅವಧಿಯವರೆಗೆ ಕಂದಾಯ ಅಧಿಕಾರಿಯಾಗಿದ್ದ ಬಸಣ್ಣ ಎಂಬುವವರು ರೈತರಿಂದ ಅರ್ಜಿಗಳನ್ನು ಪಡೆದು, ಅರ್ಜಿಗಳನ್ನು ವಜಾ ಮಾಡಿದ್ದರಿಂದ ಹಲವಾರು ವರ್ಷಗಳಿಂದ ಕುರಿಗಾಹಿಗಳು ಮತ್ತು ಸಾಗುವಳಿ ಮಾಡುತ್ತಿರುವ ರೈತರ ನಡುವೆ ಮುಸುಕಿನ ಜಗಳ ಏರ್ಪಡುತ್ತಲೇ ಇದೆ ಎಂದು ಸಾಗುವಳಿದಾರರು ಗಂಭೀರವಾಗಿ ಆರೋಪ ಮಾಡುತ್ತಿದ್ದಾರೆ.
ಕುರಿಗಾಹಿಗಳಾದ ಸಿದ್ದೇಶ, ಪುಟ್ಟ ಮಲ್ಲೇಶ, ಕೆಂಚಪ್ಪ, ಪುಟ್ಟಕ್ಕಾರ ಸಣ್ಣಪ್ಪ, ಸಾಸ್ವೇಹಳ್ಳಿ ಮಲ್ಲಿಕ, ಸಿದ್ದಪ್ಪ, ದೊಡ್ಡೇಶ ಇವರುಗಳು ವಿನಾಕಾರಣ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳಿಗೆ ಒತ್ತಡ ಹೇರುತ್ತಾ, ಸಾಗುವಳಿ ಮಾಡುತ್ತಿರುವ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಇವರಿಗೆ ಕಡಿವಾಣ ಹಾಕಲೇ ಬೇಕು ಎಂದು ರೈತರ ಒಕ್ಕೊರಲ ಆಗ್ರಹವಾಗಿದೆ.
ಅಧಿಕಾರಿಗಳ ಸಂಧಾನ ಸಭೆ ವಿಫಲ: ಘಟನೆ ಬಗ್ಗೆ ಮಾಹಿತಿ ತಿಳಿದು, ಹೊನ್ನಾಳಿ ಠಾಣೆಯ ಪಿಐ ಸಿದ್ದೇಗೌಡ, ತಹಶೀಲ್ದಾರ್ ತಿರುಪತಿ ಪಾಟೀಲ್ ಮತ್ತು ಕಂದಾಯ ನಿರೀಕ್ಷಕ ಜಯಪ್ರಕಾಶ್, ಗ್ರಾಮ ಆಡಳಿತಾಧಿಕಾರಿ ಮಹೇಂದ್ರಕುಮಾರ್ ಅವರುಗಳು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರೂ ಎರಡೂ ಕಡೆಯವರು ಅಧಿಕಾರಿಗಳ ಮಾತಿಗೆ ಬೆಲೆ ಕೊಡದೆ, ತಮ್ಮ ಜಗಳವನ್ನು ಮುಂದುವರೆಸಿದಾಗ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಕಾಲ್ಕಿತ್ತ ದೃಶ್ಯ ಕಂಡುಬಂತು.
ರೈತರ ಗೋಳು ಕೇಳೋರಾರು: ರೈತರು ಸಾಗುವಳಿ ಮಾಡುವ ಮೊದಲು ಜಂಗಲ್ ಕಟ್ ಮಾಡಿಸಿ ಸಾಗುವಳಿಗೆ ಅಣಿಯಾಗುವುದಕ್ಕೆ ಎಕರೆಗೆ 40 ಸಾವಿರದಷ್ಟು ಖರ್ಚು-ವೆಚ್ಚ ತಗಲುತ್ತದೆ. ಕಳೆದ ವರ್ಷ ಅಧಿಕಾರಿಗಳು ಸಾಗುವಳಿ ಮಾಡುವುದನ್ನು ತಡೆಹಿಡಿದಿದ್ದು, ಈ ವರ್ಷ ಸಾಲ ಮಾಡಿ ಮತ್ತೆ ಜಂಗಲ್ ಕಟ್ ಮಾಡಿಸಿ ಉಳುಮೆ ಮಾಡಿದರೆ ಮತ್ತೆ ಕುರಿಗಾಹಿಗಳು ತೊಂದರೆ ಕೊಡುತ್ತಿದ್ದಾರೆ. ಮೊದಲೇ ಈ ವರ್ಷ ಮಳೆಯಿಲ್ಲದೇ ಕಂಗಾಲಾಗಿದ್ದೇವೆ. ಜೊತೆಗೆ ಇವರ ಉಪಟಳದಿಂದ ದಿಕ್ಕೇ ತೋಚದಂತಾಗಿದೆ. ನಮಗೆ ಹಕ್ಕುಪತ್ರ ಕೊಡಿಸಿ, ಶಾಶ್ವತವಾಗಿ ಈ ಸಮಸ್ಯೆಗೆ ತಿಲಾಂಜಲಿ ಹಾಡುವಂತೆ ಅಧಿಕಾರಿಗಳು ಮತ್ತು ಹಾಲಿ ಶಾಸಕರ ಬಳಿ ಎಲ್ಲಾ ಸಾಗುವಳಿದಾರರು ಮನವಿ ಮಾಡಿಕೊಂಡಿದ್ದೇವೆ ಎಂದು ರೈತ ಶಿವಪ್ಪ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ಕುರಿಗಾಹಿಗಳ ಮನವಿ: 100 ಜಾನುವಾರುಗಳಿಗೆ 30 ಎಕರೆ ಗೋಮಾಳಕ್ಕಾಗಿ ಜಾಗ ಮೀಸಲಿಡಬೇಕು ಎಂದು ಕಾನೂನಿನನ್ವಯ ನಿಯಮವಿದ್ದು ನಮ್ಮ ಕುರಿಗಳನ್ನು ಮೇಯಿಸಲು ಜಾಗವನ್ನು ಮೀಸಲಿಡಬೇಕು. ರೈತರು ಸಾಗುವಳಿ ಮಾಡುತ್ತಿರುವುದರಿಂದ ನಮ್ಮ ಕುರಿಗಳನ್ನು ಮೇಯಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಮಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡುವುದನ್ನು ಬಿಡುವುದಿಲ್ಲ ಎಂದು ಕುರಿಗಾಹಿಗಳು ತಮ್ಮ ಸಮಸ್ಯೆಯನ್ನು ತೋಡಿಕೊಂಡರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ 3 ಬಾರಿ ಕುರಿಗಳ ಮುತ್ತಿಗೆ: ಅರಬಗಟ್ಟೆ ಗ್ರಾಮದಲ್ಲಿ ಈ ಹಿಂದೆ ನಡೆದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಸರ್ಕಾರಿ ಕಾರ್ಯಕ್ರಮದಲ್ಲಿ ಅಂದಿನ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಅಧಿಕಾರಿಗಳಿದ್ದ ಕಾರ್ಯಕ್ರಮಕ್ಕೆ 3 ಬಾರಿ ಕುರಿಗಳಿಂದ ಮುತ್ತಿಗೆ ಹಾಕಿ ಶಾಸಕರು ಮತ್ತು ಅಧಿಕಾರಿಗಳಿಗೆ ನಮ್ಮ ಸಮಸ್ಯೆಯನ್ನು ತೋಡಿಕೊಂಡರೂ, ಯಾರೂ ನಮ್ಮ ಸಮಸ್ಯೆ ಕಡೆಗೆ ಗಮನ ಹರಿ ಸಲಿಲ್ಲ ಎಂದು ಕುರಿಗಾಹಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಶಾಶ್ವತ ಪರಿಹಾರಕ್ಕೆ ಒತ್ತಾಯ: ಕಳೆದ ವರ್ಷ ಕಂದಾಯ ಇಲಾಖಾಧಿಕಾರಿಗಳು ಸಾಗುವಳಿ ಮಾಡುವುದನ್ನು ತಡೆಹಿಡಿದಿದ್ದು, ಈ ವರ್ಷ ಮತ್ತೆ ಸಾಗುವಳಿ ಮಾಡುತ್ತಿದ್ದೇವೆ. ನಮ್ಮ ಸಮಸ್ಯೆಯ ಗಂಭೀರತೆಯನ್ನು ಅರಿತು, ನಮ್ಮ-ನಮ್ಮಲ್ಲೇ ಜಗಳವಾಗುವುದನ್ನು ತಪ್ಪಿಸಲು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿಗಳು, ಹಾಲಿ ಶಾಸಕ ಡಿ.ಜಿ.ಶಾಂತನಗೌಡ, ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಶೀಘ್ರದಲ್ಲೇ ಸಭೆ ನಡೆಸಿ, ನಮ್ಮ ಅರ್ಜಿಗಳನ್ನು ಪುರಸ್ಕರಿಸಿ ನಮಗೆ ಹಕ್ಕುಪತ್ರದ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಆಗ ಏನ್ಮಾಡ್ತಿದ್ರಿ???? : ನ್ಯಾಮತಿ ತಾಲ್ಲೂಕಿನ ದೊಡ್ಡೆತ್ತಿನಹಳ್ಳಿ ಮತ್ತು ಕೆಂಚಿಕೊಪ್ಪ ಗ್ರಾಮಗಳಿಗೆ ಮಂಜೂರಾಗಿದ್ದ ಇಂದಿರಾ ಗಾಂಧಿ ವಸತಿ ಶಾಲೆ (ಪರಿಶಿಷ್ಟ ಜಾತಿ), ಇಂದಿರಾ ಗಾಂಧಿ ವಸತಿ ಶಾಲೆ (ಪರಿಶಿಷ್ಟ ಪಂಗಡ) ವಸತಿ ಶಾಲೆಗಳಿಗೆ ಆ ಗ್ರಾಮಗಳ ಗ್ರಾಮಸ್ಥರು ಅವಕಾಶ ಕೊಡದೇ ಬೇರೆಡೆ ಮಂಜೂರಾಗಿದ್ದ ವಸತಿ ಶಾಲೆಗಳು 23 ಎಕರೆ ವಿಸ್ತೀರ್ಣದ ಗೋಮಾಳ ಪ್ರದೇಶವನ್ನು ಆಕ್ರಮಿಸಿಕೊಂಡು ಅರಬಗಟ್ಟೆಗೆ ಸ್ಥಳಾಂತರಗೊಂಡಾಗ ನಿಮಗೆ ಮೀಸಲಿದ್ದ ಜಾಗ ವಸತಿ ಶಾಲೆಗಳ ಪಾಲಾಯಿತು. ಕುರಿಗಾಹಿಗಳು ಮತ್ತು ಗೋಮಾಳ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿದ್ದ ರೈತರು ಆಗ ಹೋರಾಟ ಮಾಡಿ, ಗೋಮಾಳ ಜಾಗವನ್ನು ಯಾಕೆ ಉಳಿಸಿಕೊಳ್ಳಲಿಲ್ಲ ಎಂಬ ಅರಬಗಟ್ಟೆ ಗ್ರಾಮಸ್ಥರ ಪ್ರಶ್ನೆಗೆ ಈ ಹೋರಾಟಗಾರರಲ್ಲಿ ಉತ್ತರ ಸಿಗಲಿಲ್ಲ.