ಕುಂದೂರು ಪಂಚಾಯ್ತಿಯಿಂದ ಸರ್ಕಾರಿ ಕಟ್ಟಡ ನೆಲಸಮ

ಕುಂದೂರು ಪಂಚಾಯ್ತಿಯಿಂದ ಸರ್ಕಾರಿ ಕಟ್ಟಡ ನೆಲಸಮ

ನಾಲ್ಕನೇ ದಿನಕ್ಕೆ ಮುಂದುವರೆದ ಅಹೋರಾತ್ರಿ ಧರಣಿ

ಹೊನ್ನಾಳಿ, ಜು.6- ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಮಾರು 50 ಲಕ್ಷ ರೂ. ವೆಚ್ಚದ ಕಟ್ಟಡವನ್ನು ನೆಲಸಮ ಮಾಡಿದ್ದು, ಇದಕ್ಕೆ ಕಾರಣರಾದ ಪಂಚಾಯ್ತಿ ಅಧಿಕಾರಿಗಳು ಹಾಗೂ ಅಧ್ಯಕ್ಷ, ಉಪಾಧ್ಯಕ್ಷರನ್ನೊಳಗೊಂಡಂತೆ 9 ಜನ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಕಟ್ಟಡದ ವೆಚ್ಚವನ್ನು ಅವರೇ ಭರಿಸುವಂತೆ ಒತ್ತಾಯಿಸಿ, ಕುಂದೂರು ಗ್ರಾ.ಪಂ. ಎದುರು ಸಾಮಾಜಿಕ ಕಾರ್ಯಕರ್ತ ಬಿ.ಪ್ರಸನ್ನಕುಮಾರ್  ಅವರ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಇಂದಿಗೆ 4 ನೇ ದಿನಕ್ಕೆ ಮುಂದುವರೆದಿದೆ.

ಕುಂದೂರು ಗ್ರಾಮದಲ್ಲಿನ ರಾಜಸ್ವ ನಿರೀಕ್ಷಕರ 25 ವರ್ಷದ ಒಂದು ಕಟ್ಟಡ, ಅದಕ್ಕೆ ಹೊಂದಿಕೊಂಡಿದ್ದ 10 ವರ್ಷದ ಇತ್ತೀಚಿನ 2 ಕಟ್ಟಡಗಳು ಸೇರಿದಂತೆ ಒಟ್ಟು 40 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಕಟ್ಟಡ ಇದಾಗಿದ್ದು,
ಸೂಕ್ತ ಕಾರಣವಿಲ್ಲದೇ ಪಂಚಾಯ್ತಿಯು ಕಟ್ಟಡ ಕೆಡವಿ ನೆಲಸಮ ಮಾಡಿದೆ ಎಂಬುದು ಪ್ರತಿಭಟನಾಕಾರರಾದ ಬಿ.ಪ್ರಸನ್ನ ಹಾಗೂ ಬೆಂಬಲಿಗರ ಗಂಭೀರ ಆರೋಪವಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ಅಧಿನಿಯಮ-1993ರ ಪ್ರಕರಣ
ಹಾಗೂ ಸದರಿ ಅಧಿನಿಯಮದಡಿ ಪಂಚಾಯ್ತಿ ಸದಸ್ಯರನ್ನು ಅನರ್ಹಗೊಳಿಸುವಂತೆ, ಕಟ್ಟಡಕ್ಕೆ ತಗುಲಿರುವ ವೆಚ್ಚವನ್ನು ಭರಿಸುವಂತೆ ಒತ್ತಾಯಿಸುವ ಮೂಲಕ ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆಯೊಂದಿಗೆ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಆಗ್ರಹಿಸಿದರು.

ಕಟ್ಟಡ ಕೆಡವಲು ಸಂಬಂಧಪಟ್ಟ ಇಲಾಖೆಯ ಪೂರ್ವಾನುಮತಿ ಪಡೆಯದೇ, ಸರ್ಕಾರದ ನೀತಿ, ನಿಯಮಗಳನ್ನು ಉಲ್ಲಂಘಿ ಸಿದ್ದು, ಇದನ್ನು ಗಮನಿಸಿದ ಲೋಕಾಯುಕ್ತವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ನಮಗೆ ನ್ಯಾಯ ಒದಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಗ್ರಾ.ಪಂ. ಕಚೇರಿ ಮುಂಭಾಗದಲ್ಲಿ ಜಿಟಿ ಜಿಟಿ ಸುರಿಯುತ್ತಿರುವ ಮಳೆಯ ನಡುವೆಯೂ ಅನಿರ್ದಿಷ್ಟಾವಧಿ ಧರಣಿಯು 4 ನೇ ದಿನಕ್ಕೆ ಮುಂದುವರೆದಿದ್ದು, ಬುಧವಾರ ಸ್ಥಳಕ್ಕೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹ ಣಾಧಿಕಾರಿ ಬಂದು ಚರ್ಚಿಸಿದರೂ ಏನು ಫಲಪ್ರದವಾಗದೇ ಹೋರಾಟ ಮುಂದುವರೆದಿರುವುದಾಗಿ ವರದಿಯಾಗಿದೆ.

ಭ್ರಷ್ಟಾಚಾರ ವಿರೋಧಿ ವೇದಿಕೆಯ ಅಧ್ಯಕ್ಷ ಗುರುಪಾದಯ್ಯ ಮಠದ್ ಮಾತನಾಡಿ, ಈ ಕಟ್ಟಡಗಳನ್ನು ತೆರವುಗೊಳಿಸಿದ್ದನ್ನು ನೋಡಿದರೆ ಭ್ರಷ್ಟಾಚಾರ ನಡೆದಿರುವುದು ಎದ್ದು
ಕಾಣುತ್ತಿದೆ. ಇದರ ಹಿಂದೆ ಪ್ರಭಾವಿಗಳ ಕೈವಾಡವಿರುವುದು ತನಿಖೆಯಿಂದ ಹೊರ ಬರಬೇಕಾಗಿದೆ. ಸುವ್ಯವಸ್ಥಿತವಾಗಿದ್ದ ಕಟ್ಟಡಗಳನ್ನು ನೆಲಸಮ ಮಾಡಿ, ಮತ್ತೆ ಸರ್ಕಾರದಿಂದ ಅನುದಾನ ತಂದು ಹಣ ಕೊಳ್ಳೆ ಹೊಡೆಯುವ ವ್ಯವಸ್ಥಿತ ಹುನ್ನಾರ ನಡೆದಿದೆ. 

ಈ ಪ್ರಕರಣ ಬಗೆಹರಿಯುವವರೆಗೂ ಪ್ರಸನ್ನ ಅವರ ಹೋರಾಟಕ್ಕೆ ನಮ್ಮ ವೇದಿಕೆಯು ಬೆಂಬಲವಾಗಿ ನಿಲ್ಲಲಿದೆ ಎಂದು ಮಾಹಿತಿ ನೀಡಿದರು.

 ಕರವೇ ಅಧ್ಯಕ್ಷ ವಿನಯ್ ವಗ್ಗರ್, ಸಾಮಾಜಿಕ ಹೋರಾಟಗಾರರಾದ ರಾಜು ಕಡಗಣ್ಣಾರ್, ಶಿವಣ್ಣ, ಲಕ್ಷ್ಮಿಕಾಂತ್, ಕುಂದೂರಿನ ರೈತ ಮುಖಂಡ ಶಿವಕುಮಾರ್, ಕಾನೂನು ವಿದ್ಯಾರ್ಥಿ ಅನಿಲ್, ವಿ.ಷಣ್ಮುಖ, ಮಂಜುನಾಥ್, ತಿಪ್ಪೇಶ್, ಫಕೀರಪ್ಪ,ಸಾದತ್, ಪಠಾಣ್ ಜಬೀ ಮತ್ತಿತರರು ಉಪಸ್ಥಿತರಿದ್ದರು.  

error: Content is protected !!