`ಗ್ಯಾರಂಟಿ’ : ಆಟೋ ಚಾಲಕರ ಪ್ರತಿಭಟನೆ

`ಗ್ಯಾರಂಟಿ’ : ಆಟೋ ಚಾಲಕರ ಪ್ರತಿಭಟನೆ

ದಾವಣಗೆರೆ, ಜು. 3-  ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯಿಂದಾಗಿ ಆಟೋ ಚಾಲಕರು, ಮಾಲೀಕರು  ಸಂಕಷ್ಟಕ್ಕೀಡಾಗಿದ್ದು, ಅವರ ನೆರವಿಗೆ ಬರುವಂತೆ ಶ್ರೀ ಕೃಷ್ಣ ಸಾರಥಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ರಾಲಿ ನಡೆಸಿದ ಆಟೋ ಚಾಲಕರು, ಜಿಲ್ಲಾಧಿಕಾರಿಗಳಿಗೆ ನಂತರ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಗೃಹ ಕಚೇರಿಗೆ ತೆರಳಿ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಉಚಿತ ಸಾರಿಗೆ ವ್ಯವ್ಯಸ್ಥೆ ಮಾಡಿದ್ದರಿಂದ ಆಟೋ ಚಾಲಕರು, ಮಾಲೀಕರು ದುಡಿಮೆಯಿಲ್ಲದೇ ಬೀದಿಗೆ ಬರುವಂತಾಗಿದೆ. ಕೂಡಲೇ ನಗರ ಸಾರಿಗೆ ರದ್ದು ಮಾಡಿ ಆಟೋ ಚಾಲಕರಿಗೆ, ಮಾಲೀಕರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದರು.

ರಾಜ್ಯ ಆಟೋ ಚಾಲಕರ ಅಭಿವೃದ್ಧಿ ನಿಗಮ ರಚಿಸುವ ಮೂಲಕ ಮನೆ ಇಲ್ಲದವರಿಗೆ ವಸತಿ ಸೇರಿದಂತೆ, ಸರ್ಕಾರದ ಸವಲತ್ತುಗಳನ್ನು ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಶ್ರೀನಿವಾಸಮೂರ್ತಿ, ಹೆಚ್. ಪರಶುರಾಮ್ ನಂದಿಗಾವಿ, ಮಂಜುನಾಥ್ ಬಾಳೆಕಾಯಿ, ಎನ್.ಓ. ಸಂತೋಷ್, ಕುಮಾರ್, ಜಿ.ಎಸ್. ರುದ್ರೇಶ್, ಮಂಜುನಾಥ್ ಎಲ್ ಸಂಗೀತ್, ರಾಮು, ರಾಜು ಮತ್ತಿತರರು ಭಾಗವಹಿಸಿದ್ದರು.

error: Content is protected !!