ವಿಶ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಚಯಿಸಿದ ಕರ್ನಾಟಕ

ವಿಶ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಚಯಿಸಿದ ಕರ್ನಾಟಕ

ದಾವಣಗೆರೆ, ಜು. 3- ಪ್ರಜಾಪ್ರಭುತ್ವವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ನಾಡು ಕನ್ನಡ ನಾಡು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು.

ನಗರದ ಈಶ್ವರಮ್ಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಶಾಲಾ ಮಂತ್ರಿ ಮಂಡಲದ ಪ್ರತಿಜ್ಞಾ ಸ್ವೀಕಾರ ಮತ್ತು ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಎಲ್ಲಾ ಶಿವ ಶರಣರು ಮುಕ್ತವಾಗಿ ಚರ್ಚಿಸಲು ಅವಕಾಶವಿತ್ತು. ಅನುಭವ ಮಂಟಪವನ್ನು ಜಗತ್ತಿನ ಮೊದಲನೆ ಪಾರ್ಲಿ ಮೆಂಟ್ ಎಂದು ಕರೆಯಲಾಗಿದೆ ಎಂದರು.

ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತವಾಗಿ ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವತಂತ್ರವಾಗಿ ಶಾಂತಿಯುತವಾಗಿ ಬದುಕುತ್ತಿದ್ದೇವೆ. ಅದರ ಪ್ರತಿರೂಪವೇ ಶಾಲಾ ಮಂತ್ರಿಮಂಡಲವಾಗಿದೆ  ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಕೆ.ಆರ್. ಸುಜಾತ ಕೃಷ್ಣ ಮಾತನಾಡಿ, ಮಂತ್ರಿ ಮಂಡಲದ ಎಲ್ಲಾ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕ ರಿಸಿದಂತೆ ಮೌಲ್ಯಗಳನ್ನು ಅಳ ವಡಿಸಿಕೊಂಡು ಬದುಕಬೇಕು. ಮಂತ್ರಿ ಮಂಡಲದ ಉದ್ದೇಶವನ್ನು ಸಾರ್ಥಕಪಡಿಸಿ ಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಿರಿ ಎಂದು ಹಾರೈಸಿದರು.

ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದ 10 ನೇ ತರಗತಿ ವಿದ್ಯಾರ್ಥಿನಿ ಹೆಚ್.ಎಂ. ಶ್ರೀದೇವಿ ಮುಖ್ಯಮಂತ್ರಿಯಾಗಿ, ಆರ್.ಎಲ್. ಸುಭಾಷ್ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು.

ಸಹ ಶಿಕ್ಷಕಿ ಹೇಮಲತಾ ಚುನಾವಣಾ ಪ್ರಕ್ರಿಯೆ ವಿವರಿಸಿದರು. 25 ಸಚಿವರನ್ನು ಒಳಗೊಂಡ ಶಾಲಾ ಮಂತ್ರಿಮಂಡಲದಲ್ಲಿ ರಾಜ್ಯಪಾಲರಾಗಿ ಪ್ರಾಂಶುಪಾಲ ಕೆ.ಎಸ್. ಪ್ರಭುಕುಮಾರ್, ಸಭಾಪತಿಯಾಗಿ ಉಪ ಪ್ರಾಂಶುಪಾಲರಾದ ಜಿ.ಎಸ್. ಶಶಿರೇಖಾ, ಸಂಪುಟ ಕಾರ್ಯದರ್ಶಿಯಾಗಿ ಸಹ ಶಿಕ್ಷಕಿ ರೋಹಿಣಿ ಎಂ. ಬಾವಿ ನಾಯಕರಾಗುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾದರು.

ಸಹ ಶಿಕ್ಷಕಿ ರಂಜಿನಿ ವಿದ್ಯಾರ್ಥಿ ಸಂಘಗಳನ್ನು ಪರಿಚಯಿಸಿದರು.  ಈಶ್ವರಮ್ಮ ಟ್ರಸ್ಟ್ ಕಾರ್ಯದರ್ಶಿ ಜಿ.ಆರ್. ವಿಜಯಾನಂದ್ ಉಪಸ್ಥಿತರಿದ್ದರು. ಜಿ.ಎಸ್. ಶಶಿರೇಖಾ ಸ್ವಾಗತಿಸಿದರು. ಎನ್.ಎಸ್. ಸವಿತ ವಂದಿಸಿದರು. ಬಿ. ಶ್ರೀದೇವಿ ನಿರೂಪಿಸಿದರು. 

error: Content is protected !!