`ಮನೆ ಮನೆಗೆ ಗಂಗೆ’ ಯೋಜನೆ ಸಂಪೂರ್ಣ ಅವೈಜ್ಞಾನಿಕ

`ಮನೆ ಮನೆಗೆ ಗಂಗೆ’ ಯೋಜನೆ ಸಂಪೂರ್ಣ ಅವೈಜ್ಞಾನಿಕ

ರಾಣೇಬೆನ್ನೂರು : ರೈತ ಮುಖಂಡ, ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ್ ಆರೋಪ

ರಾಣೇಬೆನ್ನೂರು, ಜು.3-  ದೇಶಾದ್ಯಂತ ಗ್ರಾಮೀಣ ಭಾಗಗಳಲ್ಲಿ ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ `ಜಲ ಜೀವನ ಮಿಷನ್’ (ಹರ್ ಘರ್ ಜಲ್) ಮನೆ ಮನೆಗೆ ಗಂಗೆ ಯೋಜನೆ ಸಂಪೂರ್ಣ ಅವೈಜ್ಞಾನಿಕ ಯೋಜನೆಯಾಗಿದೆ ಎಂದು  ರೈತ ಮುಖಂಡ, ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ್ ಗಂಭೀರ ಆರೋಪ ಮಾಡಿದರು. 

ಮುಷ್ಟೂರಿನಲ್ಲಿ ನಡೆದ ಗ್ರಾಮೀಣ ನೀರು ಸರಬರಾಜು ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. 

ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಅನೇಕ ವರ್ಷಗಳ ಪ್ರಯತ್ನದ ಫಲವಾಗಿ ಗ್ರಾಮೀಣ ಭಾಗದ ಜನರ ಬಹು ದಿನಗಳ ಕನಸಿನ ಗುಣಮಟ್ಟದ ಸಿ.ಸಿ. ಮತ್ತು ಡಾಂಬರ್ ರಸ್ತೆಗಳು ಈ ಯೋಜನೆಯ ಪೈಪ್‍ಲೈನ್ ಹಾಕುವ ನೆಪದಿಂದ ಜೆ.ಸಿ.ಬಿ. ಯಂತ್ರಗಳಿಂದ ಕಿತ್ತು ಹೋಗಿವೆ. 

ಒಂದು ಬಾರಿ ರಸ್ತೆ ಮಂಜೂರು ಮಾಡಿಸಿಕೊಳ್ಳುವುದೇ ದುಸ್ತರ. ಅಂಥದ್ದರಲ್ಲಿ ಇತ್ತೀಚೆಗೆ ನಿರ್ಮಾಣವಾಗಿರುವ ಎಸ್‌ಸಿಪಿ  ಮತ್ತು ಟಿಎಸ್‌ಪಿ  ಯೋಜನೆಯಲ್ಲಿ ಎಸ್ಸಿ, ಎಸ್ಟಿ ಜನಾಂಗದವರು ವಾಸಿಸುವ ಓಣಿಯು ಸೇರಿದಂತೆ ಇತರೆ ಜನಾಂದವರು ವಾಸಿಸುವ ಪ್ರದೇಶಗಳಲ್ಲಿ ನಿರ್ಮಾಣವಾಗಿದ್ದ ವಿಶೇಷ ಯೋಜನೆಯ ರಸ್ತೆಗಳೆಲ್ಲಾ ಈ ಪೈಪ್‍ಲೈನ್‍ನಿಂದ ಕಿತ್ತು ಹೋಗಿವೆ ಎಂದರು.

ಆಯಾ ರಾಜ್ಯ ಸರ್ಕಾರಗಳು ಎನ್‌ಆರ್‌ಇಜಿ ಶಾಸಕರ, ಸಂಸದರ ಪ್ರದೇಶಾ ಭಿವೃದ್ಧಿಯಂಥ ವಿವಿಧ ಯೋಜನೆಗಳಲ್ಲಿ ನಿರ್ಮಾಣವಾಗಿದ್ದ ರಸ್ತೆಗಳನ್ನೆಲ್ಲಾ ಯಂತ್ರ ಗಳಿಂದ ಕೆಡಿಸಿ ಜನರು ಮತ್ತು ವಾಹನಗಳು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾ ಗಿರುವುದಕ್ಕೆ ಯೋಜನೆಯ ಅವೈಜ್ಞಾನಿಕ ನೀತಿ ಮತ್ತು ಯೋಜನೆಯಲ್ಲಿ ನಡೆದಿರುವ ಭ್ರಷ್ಠಚಾರ ಕಾರಣವಾಗಿದೆ  ಎಂದು ಹೇಳಿದರು.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಮೋದಿ ನೇತೃತ್ವದ 2 ನೇ ಅವಧಿಯ ಕೇಂದ್ರ ಸರ್ಕಾರ ದೇಶದ ಗ್ರಾಮೀಣ ಭಾಗಗಳಲ್ಲಿ ಜಾರಿಗೆ ತಂದು, ವ್ಯಾಪಕ ಭ್ರಷ್ಟಾಚಾರ ನಡೆಸಿದ ಯೋಜನೆ ಇದಾಗಿದ್ದು, ಯೋಜನೆಯ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.  

ರಸ್ತೆ ಪುನರ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆ ಮಾಡಿದ ಬ್ರಹ್ಮಾಂಡ ಭ್ರಷ್ಟಾಚಾರದ ಯೋಜನೆಯಾಗಿದೆ ಎಂದು      ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತರುವ ಮುನ್ನ ಯೋಜನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿತ್ತು ಎಂದು ಹೇಳಿದರು.

ಕುಡಿಯುವ ನೀರಿನ ಯೋಜನೆಯಲ್ಲಿದ್ದ ಹಳೆಯ ನೀರಿನ ಟ್ಯಾಂಕರ್‍ಗಳಿಗೆ `ನೀಲಿ’ ಬಣ್ಣ ಹಚ್ಚಿ ‘30’ ವರ್ಷಗಳ ತನಕ ಸಮಿತಿಯವರು ಈ ಟ್ಯಾಂಕರನ್ನು ಸುಸ್ತಿತಿಯಲ್ಲಿರುವಂತೆ ನೋಡಿಕೊಳ್ಳಬೇಕೆನ್ನುವ ಯೋಜನೆಯ ನಿಯಮ `ಹಳೇ ಮುದುಕಿಗೆ ಹೊಸ ಸೀರೆ ಉಡಿಸಿದಂತಾಗಿದೆ’ ಎಂದು ವ್ಯಂಗ್ಯವಾಡಿದರು.

ಈ ಯೋಜನೆಯಿಂದ ಗ್ರಾಮೀಣ ಭಾಗದ ಕೆಲವು ಸ್ಥಳಾಂತರ ಪ್ರದೇಶಗಳಲ್ಲಿ ರಾಜ್ಯ ಸರ್ಕಾರಗಳು ಈ ಮೊದಲು ಜಾರಿಗೆ ತಂದಿದ್ದ ವಿಶೇಷ ಕುಡಿಯುವ ನೀರಿನ ಯೋಜನೆಗಳಿಗೆ ಶಾಶ್ವತವಾಗಿ ಎಳ್ಳು ನೀರು ಬಿಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಸೆಂಟ್ರಲ್ ಕಮಿಟಿಯ ಸಂಜಯ್ ಶುಕ್ಲಾ, ಸಿಬ್ಬಂದಿಗಳಾದ ಬಸವರಾಜ್, ಹೊನ್ನಪ್ಪ ಮಾಳಪ್ಪನವರ, ಗ್ರಾ.ಪಂ. ಪಿ.ಡಿ.ಓ ಮತ್ತು ಶಾಲಾ ಸಿಬ್ಬಂದಿ ಮತ್ತು ಸಮಿತಿಯವರು, ನಾಗರಿಕರು ಉಪಸ್ಥಿತರಿದ್ದರು.

error: Content is protected !!