ಹರಪನಹಳ್ಳಿಯಲ್ಲಿ ವಿವಿಧ ಬೇಡಿಕೆಗಳಿಗಾಗಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಹರಪನಹಳ್ಳಿ, ಜೂ.30- ಅಂಗನವಾಡಿ ಕಾರ್ಯಕರ್ತೆಯರನ್ನು ಇ-ಸರ್ವೆ ಮುಕ್ತಗೊಳಿಸಲು ಮತ್ತು ಕಳಪೆ ಮೊಬೈಲ್, ಕಳಪೆ ಆಹಾರ ದಾಸ್ತಾನು, ಕಳಪೆ ಮೊಟ್ಟೆ ಇವುಗಳಿಂದ ಮುಕ್ತಿ ನೀಡಿ ಬಜೆಟ್‍ನಲ್ಲಿ ರೂ.15,000/-ಗಳ 6ನೇ ಗ್ಯಾರಂಟಿ ಜಾರಿ ಮಾಡಿ, ಗ್ರಾಜ್ಯುಟಿ ನೀಡಿ ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲ್ಲೂಕು ಅಧ್ಯಕ್ಷರಾದ ಕೆರೆಗುಡಿಹಳ್ಳಿ ಟಿ.ಬಸಮ್ಮ ಮಾತನಾಡಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಅನುಷ್ಠಾನಕ್ಕಾಗಿ ಕಳೆದ 4 ವರ್ಷಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗಿರುವ ಮೊಬೈಲ್‍ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಬಹುತೇಕ ಹಾಳಾಗಿವೆ. ಸದರಿ ಮೊಬೈಲ್‍ಗಳಲ್ಲಿ ಮಾಹಿತಿ ಸಂಗ್ರಹ ಸೇರಿದಂತೆ ಮತ್ತು ಇತರೆ ಕೆಲಸ ನಿರ್ವಹಿಸುವುದು ಕಷ್ಟಕರವಾಗಿರುತ್ತದೆ. ಇದರೊಂದಿಗೆ ಬೇರೆ ಇಲಾಖೆಯಾಗಿರುವ ಆರೋಗ್ಯ ಇಲಾಖೆಯ ಕಾರ್ಯಕ್ರಮದ ಆರೋಗ್ಯ ಸಮೀಕ್ಷೆಯನ್ನು ಅಂಗನವಾಡಿ ಕಾರ್ಯಕರ್ತೆಯರು ನಿರ್ವಹಿಸಿ, ತಮ್ಮ ಮೊಬೈಲ್‍ಗಳಲ್ಲಿ ಮಾಹಿತಿಗಳನ್ನು ಅಪ್‌ಲೋಡ್ ಮಾಡಲು ತೀವ್ರ ಒತ್ತಡ ಹೇರಲಾಗುತ್ತಿದೆ. ಈ ಕುರಿತಂತೆ ಹಲವಾರು ಬಾರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಗಮನ ಸೆಳೆದಾಗ್ಯೂ ಸಹ ತಾವು ಯಾವುದೇ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಬೇರೆ ಇಲಾಖೆಯ ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳಬಾರದು. ಕಳಪೆ ಗುಣಮಟ್ಟದ ಮತ್ತು ಹಾಳಾಗಿರುವ ಮೊಬೈಲ್‍ಗಳನ್ನು ಕೂಡಲೇ ವಾಪಸ್ ಪಡೆದು ಹೊಸ ಮೊಬೈಲ್ ಅಥವಾ ಮಿನಿ ಟ್ಯಾಬ್‍ಗಳನ್ನು ನೀಡಬೇಕು.
ಅಂಗನವಾಡಿಗಳಿಗೆ ಸರಬರಾಜು ಮಾಡುತ್ತಿರುವ ಮೊಟ್ಟೆ ಟೆಂಡರ್‍ನ ಪರಿಣಾಮ ಮೊಟ್ಟೆಗಳು ಕಳಪೆ ಮತ್ತು ಕಡಿಮೆ ಗಾತ್ರದಿಂದ ಕೂಡಿದ್ದು, ಇದು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುತ್ತಿರುವುದರಿಂದ ಹಾಗೂ ಸರಿಯಾದ ಸಮಯಕ್ಕೆ ಸರಬರಾಜು ಮಾಡದೇ ಇರುವುದರಿಂದ ಮೊಟ್ಟೆ ಖರೀದಿಯ ಜವಾಬ್ದಾರಿಯನ್ನು ಬಾಲವಿಕಾಸ ಸಮಿತಿಗೆ ನೀಡಬೇಕು ಎಂಬ 7 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಶಿರಗನಹಳ್ಳಿ ಮಂಜುಳಾ, ಖಜಾಂಚಿ ಎನ್.ಎಂ. ಸುಮಂಗಲತಾಯಿ, ನೀಲಗುಂದ ಸುಮ, ನಿವೇದಿತ, ದುರುಗಮ್ಮ, ಎ.ಐ.ಟಿಯು.ಸಿ ಸಂಚಾಲಕ ಬಳಿಗಾನೂರು ಕೊಟ್ರೇಶ್, ಎಐಎಸ್‍ಎಫ್ ರಾಜ್ಯ ಮುಖಂಡ ರಮೇಶನಾಯ್ಕ, ಸಿಪಿಐ ಮುಖಂಡ ಚಂದ್ರನಾಯ್ಕ ಸೇರಿದಂತೆ ಇತರರು ಇದ್ದರು.