ರಾಣೇಬೆನ್ನೂರಿನ ಶಾಸಕ ಪ್ರಕಾಶ ಕೋಳಿವಾಡ
ರಾಣೇಬೆನ್ನೂರು, ಜೂ. 30 – ಸಂಶೋಧನೆ ಕಛೇರಿಗಳ ಕಡತಗಳಲ್ಲಿ ಕೊಳೆಯಬಾರದು, ಕೇವಲ ಪತ್ರಿಕೆಗಳಲ್ಲಿ ಬರುವ ಸುದ್ದಿಗೆ ಸೀಮಿತವಾಗಬಾರದು ಅದರ ಪ್ರತಿಫಲ ದೇಶಕ್ಕೆ, ಸಾರ್ವಜನಿಕರಿಗೆ ದೊರಕುವಂತಾಗಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಅವರು ಇಂದು ಇಲ್ಲಿನ ರಾಜರಾಜೇಶ್ವರಿ ಶಾಲೆಯಲ್ಲಿ ನಡೆದ ಒಂದು ದಿನದ ರಾಷ್ಟ್ರೀಯ ಬಹುವಿಷಯಗಳ ಸಂಶೋಧನಾ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಾನು ದಶಕಗಳ ಕಾಲ ಪ್ರಧಾನ ಮಂತ್ರಿಗಳ ಭೂವಿಜ್ಞಾನ ಇಲಾಖೆ ಜೊತೆಗೂಡಿ ಮೋಡ ಬಿತ್ತನೆ ಸಂಶೋಧನೆ ನಡೆಸಿದೆ, ಅದರಿಂದ ಮಳೆ ಬರುವ ಪ್ರಮಾಣ ಎಷ್ಟು, ನೈಸರ್ಗಿಕವಾಗಿ ಅವಘಡಗಳು ಆಗಬಹುದಾ, ಅದಕ್ಕೆ ಪರಿಹಾರವೇನು ಎಲ್ಲ ರೀತಿ ಸಂಶೋಧನೆ ಮಾಡಿ ಮೋಡ ಬಿತ್ತನೆ ಮಾಡಿ ದೇಶದಲ್ಲಿ ಬರಬಹುದಾದ ಬರಗಾಲ ತಡೆಯುವ ಪ್ರಯತ್ನ ಮಾಡಿದೆ. ಯಶಸ್ಸು ಸಹ ಕಂಡೆ ಎಂದು ಶಾಸಕ ಪ್ರಕಾಶ ಕೋಳಿವಾಡ ತಮ್ಮ ಸಾಧನೆ ಹಂಚಿಕೊಂಡರು.
ಬಯೋಡೇಟಾ ಕೊಡಿ ಕೆಲಸ ಪಡೆಯಿರಿ ಎನ್ನುವುದರೊಂದಿಗೆ ತಾಲ್ಲೂಕಿನ ಯುವಕರ ಸ್ಥಿತಿಗತಿ ಅರಿತೆ ಆ ಮೂಲಕ ಅವಶ್ಯವಿರುವ ಉದ್ಯೋಗ ದೊರಕಿಸಿಕೊಡುವ ಪ್ರಯತ್ನ ಮಾಡಿದೆ. ಇದು ಸಂಶೋಧನೆ ಇದ್ದಂತೆ ಅದನ್ನ ನನ್ನ ಪಿಕೆಕೆ ಕಛೇರಿಯಲ್ಲಿ ಕೊಳೆಯಲು ಬಿಡದೆ ಅದು ಇಲ್ಲಿನ ಯುವಶಕ್ತಿಯ ಬದುಕಿಗೆ ದಾರಿಯಾಗುವಂತೆ ಮಾಡಿದೆ. ರಾಜಕಾರಿಣಿಗಳು ಸಂಶೋಧಕರಾಗಬಹುದು ಎಂದು ಅರಿತೆ ಎಂದು ಶಾಸಕರು ಹೇಳಿದರು.
ವಿಜಯಪುರದ ವಿಶ್ವವಿದ್ಯಾಲಯದ ರಿಜಿಸ್ಟರ್ ಬಿ.ಎಸ್. ನಾವಿ, ಚಲನಚಿತ್ರ ನಿರ್ಮಾಪಕಿ ಅರುಣರಾಜೇ ಪಾಟೀಲ್, ಸ್ಥಳಿಯ ಆಡಳಿತ ಮಂಡಳಿಯ ಬಸವರಾಜ ಪಟ್ಟಣಶೆಟ್ಟಿ ಸಂಘಟಕಿ ಅನುರಾಧ ವೇದಿಕೆಯಲ್ಲಿದ್ದರು, ವಿಪಿ ಲಿಂಗನಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ನಾರಾಯಣ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಎಸ್.ಎಲ್. ಕಾರಿವಾಡ ಪರಿಚಯಿಸಿ, ವಂದನಾರ್ಪಣೆ ಮಾಡಿದರು.