ಸಂಘರ್ಷಗಳ ಅಂತ್ಯಕ್ಕೆ ಏಕರೂಪ ನಾಗರಿಕ ಸಂಹಿತೆ ಬೇಕು : ರಂಭಾಪುರಿ ಶ್ರೀ

ಸಂಘರ್ಷಗಳ ಅಂತ್ಯಕ್ಕೆ ಏಕರೂಪ ನಾಗರಿಕ ಸಂಹಿತೆ ಬೇಕು : ರಂಭಾಪುರಿ ಶ್ರೀ

ಹರಿಹರ, ಜೂ. 30-   ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದರೆ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ  ದಿನ ನಿತ್ಯ ನಡೆಯುತ್ತಿರುವ  ಸಂಘರ್ಷಗಳು   ಅಂತ್ಯ ಆಗುವ ಸಾಧ್ಯತೆಯಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ದೇವಸ್ಥಾನ ರಸ್ತೆಯ ರೇಣುಕಾ ಮಂದಿರದ ಸಭಾಂಗಣದಲ್ಲಿ ನಡೆಯುತ್ತಿರುವ ಇಷ್ಟಲಿಂಗ ಪೂಜೆ ಹಾಗೂ ಧರ್ಮ ಜಾಗೃತಿ ವೇದಿಕೆಯ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 

 ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಂದಿನ ದಿನಗಳಲ್ಲಿ ಏನು ಆಗಬಹುದು ಎಂಬ ನಿರೀಕ್ಷೆ ಅಥವಾ ಚುನಾವಣೆ ದೃಷ್ಟಿಕೋನದಿಂದ   ಹೇಳಿರಲಿ, ಆದರೆ ಇದು ಅತ್ಯಂತ ಸೂಕ್ತ ಮತ್ತು ಸಮಂಜಸವಾದ ಮಾತಾಗಿದ್ದು, ಆಗದ ಕೆಲವರು ಅಲ್ಲಗೆಳೆಯುವುದು ಸಹಜ. ಪ್ರಜ್ಞಾವಂತರು, ಜೊತೆಗೆ ಹಿಂದೂ ಸಂಸ್ಕೃತಿಯನ್ನು ಅನುಸರಿಸುವವರು, ದೇಶದ ಸಮಗ್ರತೆಯನ್ನು ರಕ್ಷಿಸಿಕೊಳ್ಳು ವವರು, ಅಭಿವೃದ್ಧಿ ಮತ್ತು ಎಲ್ಲಾ ಸಮುದಾಯದ ಶ್ರೇಯಸ್ಸು ಇಟ್ಟುಕೊಂಡು ಇಂತಹ ಚಿಂತನೆ ಮಾಡಿದ್ದರಿಂದ ಪ್ರತಿಯೊಬ್ಬರೂ ಸ್ಪಂದಿಸಬೇಕಾಗಿದ್ದು, ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. 

ಭಕ್ತರ ಕಲ್ಯಾಣಕ್ಕಾಗಿ,  ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರಿಂದ ಆಷಾಢ ಮಾಸದ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ  ಎಂದರು. 

ಮನುಷ್ಯರು ಧಾರ್ಮಿಕ ಕಾರ್ಯಕ್ರಮ ಮಾಡಿಕೊಂಡು ಬರುವುದಷ್ಟೇ ಅಲ್ಲ, ಅದರ ಹಿಂದೆ ಆರೋಗ್ಯವಂತ ಸಮಾಜಕ್ಕೆ ಪೂರಕವಾದ ಅಂಶಗಳನ್ನು ರೂಢಿಸಿಕೊಂಡು, ಕ್ರೀಯಶೀಲರಾಗಿ, ಶ್ರಮವಹಿಸಿ ದುಡಿದರೆ ಜೀವನದಲ್ಲಿ ಆರ್ಥಿಕವಾಗಿ ಸಫಲತೆಯನ್ನು ಪಡೆಯ ಬಹುದಾಗಿದೆ. ಯಾವ ವ್ಯಕ್ತಿ ಶ್ರಮವಹಿಸಿ ಕೆಲಸ ಮಾಡುತ್ತಾರೋ ಮತ್ತು ಭೂಮಿ ತಾಯಿಗೆ ತನ್ನ ಬೆವರನ್ನು ಸುರಿಸುತ್ತಾರೋ, ಅಂತಹ ವ್ಯಕ್ತಿಗಳು ತಮ್ಮ ಬಾಳಿನಲ್ಲಿ ಉನ್ನತವಾದ ಶ್ರೇಯಸ್ಸು ಕಾಣುತ್ತಾ, ಸಮಾ ಜದಲ್ಲಿ ಉತ್ತುಂಗದ ಸ್ಥಾನವನ್ನು ಅಲಂಕರಿಸುತ್ತಾರೆ.

ವಿಜ್ಞಾನ ಮನುಷ್ಯನ ಕಲ್ಯಾಣ ಬಯಸಬೇಕು. ಅದನ್ನು ಬಿಟ್ಟು ವಿನಾಶವನ್ನು ಬಯಸಬಾರದು. ಯುವಕರಲ್ಲಿ ಅದ್ಬುತ ಶಕ್ತಿಯಿದೆ. ಯುವ ಸಮುದಾಯವನ್ನು ಸನ್ಮಾರ್ಗದಲ್ಲಿ ನಡೆಸಿಕೊಂಡು, ತೆಗೆದುಕೊಂಡು ಹೋಗುವಂತಹ ದಾರ್ಶನಿಕರ ಕೊರತೆ ಮತ್ತು ಧರ್ಮದ ಬಗ್ಗೆ ಆಸಕ್ತಿ, ಪ್ರೋತ್ಸಾಹ ಕಡಿಮೆಯಿಂದ ಅಡ್ಡದಾರಿಯಲ್ಲಿ ಸಾಗುತ್ತಿದ್ದು, ಅವರಿಗೆ ಉತ್ತಮ ಸಂಸ್ಕಾರ ನೀಡಿ, ಅವರ ಜೀವನ ಅಧಃಪತನದತ್ತ ಸಾಗದಂತೆ ಎಚ್ಚರಿಕೆ ವಹಿಸಬೇಕು   ಎಂದು ಹೇಳಿದರು.

ಈ ವೇಳೆ ಶಾಸಕ ಬಿ.ಪಿ. ಹರೀಶ್, ಹರಪನಹಳ್ಳಿ ಶ್ರೀ ವರ ಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು, ದೊಡ್ಡ ಬಾತಿ ತಪೋವನ ಚೇರ್ಮನ್, ಶಶಿಕುಮಾರ್ ಮಾತನಾಡಿದರು.

ಈ ಸಂದರ್ಭದಲ್ಲಿ ಕೊಂಡಜ್ಜಿ ಈಶ್ವರಪ್ಪ, ಅಮ ರಾವತಿ ಗೌಡ್ರು ಮಹಾದೇವಪ್ಪ, ಎನ್. ಇ. ಸುರೇಶ್, ಉಪನ್ಯಾಸಕ  ವಜ್ರೇಶ್, ಪಂಚಾಕ್ಷರಿ, ಸಮಾಳ ಚಂದ್ರಪ್ಪ, ರಾಚಪ್ಪ, ಕಂಚಿಕೇರಿ ಶಿವಕುಮಾರ್, ಗುತ್ತೂರು ಹಾಲಸ್ವಾಮಿ, ಕತ್ತಲಗೇರಿ ಶಿವಯೋಗಿ ಸ್ವಾಮಿ, ಹಿರೇಮಠ ಸ್ವಾಮಿ, ಸಿದ್ದಲಿಂಗಸ್ವಾಮಿ, ಮೋಹನ್ ಹಾಸಬಾವಿ. ಇತರರು ಹಾಜರಿದ್ದರು.

error: Content is protected !!