ದೇಶೀಯ ತಳಿಗಳಿಗೆ ಒತ್ತು ನೀಡಿ, ಮತ್ತೆ ಬೆಳೆಸೋಣ

ದೇಶೀಯ ತಳಿಗಳಿಗೆ ಒತ್ತು ನೀಡಿ, ಮತ್ತೆ ಬೆಳೆಸೋಣ

ಮಲೇಬೆನ್ನೂರಿನ ಬೊಗಸೆ ಭತ್ತ ಬೀಜ ಪ್ರದಾನ ಸಮಾರಂಭದಲ್ಲಿ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ

ಮಲೇಬೆನ್ನೂರು, ಜೂ.26- ಭಾರತದಲ್ಲಿರುವ ವೈವಿಧ್ಯತೆ ಹಾಗೂ ವೈವಿಧ್ಯಮಯ ತಾಣಗಳು ಪ್ರಪಂಚದ ಬೇರೆ ಯಾವ ದೇಶದಲ್ಲೂ ಇಲ್ಲ. ಹಾಗಾಗಿ ಭಾರತ ಪ್ರಪಂಚದ ತವರೂರಾಗಿದೆ ಎಂದು ಕೊಲ್ಲಾಪುರದ ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ ಮತ್ತು ಶರಣ ಮುದ್ದಣ ಸಾವಯವ ಕೃಷಿ ಪರಿವಾರ ಹಾಗೂ ಶ್ರೀ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಂದು ಹಮ್ಮಿಕೊಂಡಿದ್ದ `ಶುದ್ಧ ನೈವೇಧ್ಯ ಸಮರ್ಪಣಂ – ಬೊಗಸೆ ಭತ್ತ ಬೀಜ ಪ್ರಧಾನ’ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ವೇದಗಳ ಕಾಲದಿಂದ ಹಿಡಿದು ಇವತ್ತಿನವರೆಗೂ ನಮ್ಮ ವೈವಿಧ್ಯತೆ ಹಾಗೆ ಇದೆ. ಅದನ್ನು ನಾವು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಮಣ್ಣಗಳೂ ಸಹ ವೈವಿಧ್ಯತೆ ಹೊಂದಿದ್ದು, ಒಂದೊಂದು ಭಾಗದಲ್ಲಿ ಒಂದೊಂದು ಬಗೆಯ ಮಣ್ಣು ಇರುತ್ತದೆ. ಆ ಮಣ್ಣಿನ ಗುಣಕ್ಕೆ ತಕ್ಕಂತೆ ನಾವು ಬೆಳೆ ಬೆಳೆಯಬೇಕೆಂದು ಸ್ವಾಮೀಜಿ ರೈತರಿಗೆ ಹೇಳಿದರು.

ಅಷ್ಟೇ ಅಲ್ಲ, ಪರಿಸರ ಕೂಡ ವಿಭಿನ್ನವಾಗಿದೆ. ಕರಾವಳಿ ಭಾಗದಲ್ಲಿ ಒಂದು ವಾತಾವರಣ ಇದ್ದರೆ, ಉತ್ತರ ಕರ್ನಾಟಕದಲ್ಲಿ ಮತ್ತೊಂದು ವಾತಾವರಣ ಇರುತ್ತದೆ. ಅಲ್ಲಿಯ ಜನರೂ ಕೂಡಾ ಅದಕ್ಕೆ ತಕ್ಕಂತೆ ವಾಸಿಸುತ್ತಿದ್ದಾರೆ. ಕೃಷಿ ಕೂಡ ಹಾಗೆ ಇದೆ. ಈ ನಿಟ್ಟಿನಲ್ಲಿ ರೈತರು ದೇಶೀಯ ತಳಿಗಳಿಗೆ ಒತ್ತು ನೀಡಬೇಕು. ವೈವಿಧ್ಯಮಯ ಬೆಳೆಗಳನ್ನು ಬೆಳೆಯುವುದರ ಜೊತೆಗೆ ವೈವಿಧ್ಯ ಮಯ ಆಹಾರ ಬಳಕೆ ಮಾಡಬೇಕು. ಕೃಷಿ ಸಂಸ್ಕೃತಿ, ನೈವೇದ್ಯ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಸ್ವಾಮೀಜಿ ರೈತರಿಗೆ ಅರ್ಥೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶರಣ ಮುದ್ದಣ ಸಾವ ಯವ ಕೃಷಿ ಪರಿವಾರದ ಬೀಜ ಸಂರಕ್ಷಕ ಕುಂಬಳೂರಿನ ಎ.ಎನ್. ಆಂಜನೇಯ ಮಾತನಾಡಿ, ಪಾರಂಪರಿಕ ಭತ್ತದ ತಳಿಗಳ ಸಂರಕ್ಷಣಾ ಅಭಿಯಾನ ನಮ್ಮ ದೇಶದಲ್ಲಿ ನಡೆಯುತ್ತಿರುವ ಬಗ್ಗೆ ಹೇಳಿ, ದೇಶೀಯ ಭತ್ತದ ಬೀಜಗಳ ಮಹತ್ವ ತಿಳಿಸಿಕೊಟ್ಟರು. 

ದೇವಸ್ಥಾನ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಬಿ.ಚಿದಾನಂದಪ್ಪ, ಹರಿಹರ ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್ ಮಾತನಾಡಿ, ರೈತರು ದೇಶೀಯ ಬೀಜಗಳ ಬಳಕೆ ಹಾಗೂ ಸಾವಯವ ಕೃಷಿಗೆ ಒತ್ತು ನೀಡಬೇಕೆಂದರು.

ಗುತ್ತೂರಿನ ಸಿದ್ಧಾರೂಢ ಮಠ ಶ್ರೀ ಪ್ರಭುಲಿಂಗ ಸ್ವಾಮೀಜಿ, ದಾಗಿನಕಟ್ಟೆ ಸಿದ್ಧಾರೂಢ ಆಶ್ರಮದ ಶ್ರೀ ಕೃಷ್ಣ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ವೇಳೆ 40 ರೈತರಿಗೆ
40 ದೇಶೀಯ ತಳಿ ಭತ್ತದ ಬೀಜಗಳನ್ನು ವಿತರಿಸಲಾಯಿತು.

ರೈತರಾದ ನಿಟ್ಟೂರಿನ ಇ.ಎಂ.ಮರುಳಸಿದ್ದಪ್ಪ, ಬಿ.ಜಿ.ಧನಂಜಯ, ಎಸ್.ಜಿ.ಪ್ರಭುದೇವ್, ಮಲೇಬೆನ್ನೂರಿನ ಕೆ.ಜಿ.ವೀರನಗೌಡ್ರು, ಕೆ.ಜಿ.ರಂಗನಾಥ್, ಹೆಚ್.ಜಿ.ಚಂದ್ರಶೇಖರ್, ಕುಂಬಳೂರಿನ ಎಸ್.ದೇವರಾಜ್, ಟಿ.ಜಗದೀಶ್, ನಾಗೋಳ್ ಚಂದ್ರಶೇಖರ್, ಎನ್.ಲೋಕೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ನಿಟ್ಟೂರಿನ ಇ.ಎಂ.ಸುಜಿತ್ ಸ್ವಾಗತಿಸಿದರು. ಕುಂಬಳೂರಿನ ಎಸ್.ಕೆ.ಹನುಮಂತಗೌಡ ವಂದಿಸಿದರು.

error: Content is protected !!