ಯುವ ಜನತೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಕಿವಿಮಾತು
ಹರಿಹರ, ಜೂ. 26- ಮಾನಸಿಕವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಹೇಳಿದರು.
ದೊಡ್ಡಬಾತಿಯ ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಂದು ಆಯೋಜಿಸಿದ್ದ ಮಾದಕ ವಸ್ತು ವ್ಯಸನವನ್ನು ತಡೆಗಟ್ಟುವ ಕುರಿತ ಕಾರ್ಯಾಗಾರ ಮತ್ತು ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವಸ್ತು ವ್ಯಸನ ಎಂಬುದು ಕೇವಲ ರಾಜ್ಯ, ರಾಷ್ಟ್ರಕ್ಕೆ ಸೀಮಿತವಲ್ಲ. ವಿಶ್ವದ ಅನೇಕ ಪ್ರಬುದ್ಧ ರಾಷ್ಷ್ರಗಳೂ ಈ ಸಮಸ್ಯೆಯಿಂದ ನಲುಗುತ್ತಿವೆ. ಇದೊಂದು ಅಂತರರಾಷ್ಟ್ರೀಯ ಸಮಸ್ಯೆಯಾಗಿದ್ದು, ಅಫ್ಘಾನಿಸ್ತಾನ, ನೈಜೀರಿಯಾದಂತಹ ರಾಷ್ಟ್ರಗಳಿಂದ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳು ರವಾನೆ ಆಗುತ್ತವೆ. ದೇಶದಲ್ಲಿ ನೆಮ್ಮದಿ ಹಾಳು ಮಾಡಲು ಕೂಡ ಮಾದಕ ವಸ್ತುಗಳನ್ನು ಬಳಸುತ್ತಾರೆ. ಮಾದಕ ವಸ್ತು ಸರಬರಾಜು ಮಾಡಲು ಪೆಡ್ಲರ್‌ಗಳು ಹುಟ್ಟಿಕೊಂಡಿದ್ದಾರೆ. ಯುವ ಜನತೆ, ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು, ಯಾವುದೇ ಕಾರಣಕ್ಕೂ ಈ ಜಾಲದ ಒಳಗೆ ಬೀಳಬಾರದು ಎಂದು ಹೇಳಿದರು.
ಮಾದಕ ವಸ್ತು ವ್ಯಸನಿಗಳಾದರೆ ಕೇವಲ ನಿಮ ಗಷ್ಟೇ ಹಾನಿ ಅಲ್ಲ ನಿಮ್ಮ ಆರೋಗ್ಯ, ಜೊತೆಗೆ ನಿಮ್ಮ ಕುಟುಂಬ, ನಿಮ್ಮ ಸುತ್ತಲಿನ ಪರಿಸರ, ಸಮಾಜಕ್ಕೆ ಹಾನಿ ಸಂಭವಿಸುತ್ತದೆ. ನಿಮ್ಮ ಸುತ್ತಲಿನ ಯಾರಾದರೂ ಇದರ ಚಟಕ್ಕೆ ಬಲಿಯಾಗಿದ್ದರೆ, ಮಾದಕ ವಸ್ತುಗಳ ಬಳಕೆ, ಮಾರಾಟ ಮಾಡುವುದು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್ ಮಾತನಾಡಿ, ಮಾದಕ ವ್ಯಸನ ಎಂಬುದು ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರಿದೆ. ದೇಶದಲ್ಲಿ 2.5 ಕೋಟಿ ಜನ ಗಾಂಜಾ ಸೇವನೆಯಲ್ಲಿದ್ದಾರೆ ಎಂದು ಸರ್ವೆ ಹೇಳುತ್ತದೆ. ಇದನ್ನು ನಿರ್ಮೂಲನೆ ಮಾಡಲು ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಆಸ್ಪತ್ರೆಯಲ್ಲಿ 104 ಆರೋಗ್ಯ ಸಹಾಯವಾಣಿ ಸ್ಥಾಪಿಸಿದ್ದೇವೆ, 11416 ಟೆಲಿ ಮಾನಸ ವ್ಯವಸ್ಥೆಯಿದ್ದು ವ್ಯಸನಿಗಳು ಕರೆ ಮಾಡಿ ಸಹಾಯ ಪಡೆಯಬಹುದು ಎಂದು ತಿಳಿಸಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ಡಾ.ಕೆ.ಕೆ.ಪ್ರಕಾಶ್ ಮಾತನಾಡಿ, ಮಾದಕ ವ್ಯಸನಿಗಳಿಗೆ ದೈಹಿಕ ಅಂಗವಿಕಲ ಮಕ್ಕಳು ಹುಟ್ಟುತ್ತಾರೆ. ಚಿಕ್ಕಂದಿನಲ್ಲಿ ಒಳ್ಳೆಯವನಾಗಿದ್ದವನು ತನ್ನ ಪರಿಸರದ ಕಾರಣಕ್ಕೆ ಬೆಳೆಯುತ್ತಾ ಕೆಟ್ಟವನಾಗಬಹುದು. ತಮ್ಮ ಸುತ್ತಲಿನ ಪರಿಸರದ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ತಪೋವನ ಸಮೂಹ ಸಂಸ್ಥೆ ಚೇರ್ಮನ್ ಶಶಿಕುಮಾರ್ ಮೆಹರ್‌ವಾಡೆ ಮಾತನಾಡಿ, ತಪೋವನದ ಡಿ ಅಡಿಕ್ಷನ್ ಸೆಂಟರ್‌ನಲ್ಲಿ ಈವರೆಗೂ 12 ಸಾವಿರ ಮಂದಿ ಮಾದಕ ವ್ಯಸನಿಗಳು ಗುಣಮುಖರಾಗಿದ್ದಾರೆ. ಗಾಂಜಾ ಗಿಡಗಳನ್ನು ಎಮ್ಮೆ, ಹಸುಗಳಿಗೆ ಹಾಕಿದರೂ ತಿನ್ನುವುದಿಲ್ಲ. ದನಗಳು ತಿನ್ನದ್ದನ್ನು ಮನುಷ್ಯ ತಿನ್ನುವ ಪ್ರವೃತ್ತಿ ಸರಿಯಲ್ಲ.
ದಾವಣಗೆರೆಯಲ್ಲಿ ಗಾಂಜಾ ಸೇವನೆ ಹೆಚ್ಚಿತ್ತು, ಈಗ ಇದು ಕಡಿಮೆ ಆಗಿದೆ. ಮಾದಕ ವಸ್ತುಗಳ ಬೇಡಿಕೆಯನ್ನು ತಗ್ಗಿಸುವುದು ಕೂಡ ನಿಯಂತ್ರಣಕ್ಕೆ ಸಹಕಾರಿ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯಮಟ್ಟದ ಸಂಸ್ಥೆ ಅರಿವು ಮೂಡಿಸುವ ಕಾರ್ಯಕ್ರಮದ ಮೂಲಕ ಬೇಡಿಕೆ ತಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಸದಾನಂದ ಹೆಗಡೆ ಮಾತನಾಡಿ, ಸಂಯಮ ಮತ್ತು ನಾಲಿಗೆ ರುಚಿಯ ನಿಯಂತ್ರಣದಿಂದ ಚಟಗಳಿಗೆ ಬಲಿಯಾಗುವುದನ್ನು ಹೇಗೆ ತಡೆಯಬಹುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಪಿ.ಎಂ. ಮಹಾಂತೇಶ್, ಡಾ.ಸುಮನಾ ಭಟ್, ಟಿ.ಆರ್. ಶೈಲಜಾ, ವೈದ್ಯಕೀಯ ನಿರ್ದೇಶಕ ಡಾ. ಶಿವರಾಜ್ ಪಾಟೀಲ್ ಇದ್ದರು.
ಉಪ ಪ್ರಾಚಾರ್ಯ ಡಾ. ಆಶ್ವಿನಿ ಸ್ವಾಗತಿಸಿದರು. ಡಾ. ಶೈಲಶ್ರೀ ನಿರೂಪಿಸಿದರು. ತಪೋವನ ವಿದ್ಯಾರ್ಥಿಗಳಾದ ಡಾ. ತನುಶ್ರೀ ತಂಡ ಮಾದಕ ವಸ್ತುಗಳ ಬಳಕೆಯಿಂದಾಗುವ ಅನಾಹುತ ಕುರಿತು ಕಿರುನಾಟಕ ಪ್ರದರ್ಶಿಸಿತು.