ನಾಡಿದ್ದು ಬಕ್ರೀದ್ ಹಬ್ಬ ಮಲೇಬೆನ್ನೂರಿನಲ್ಲಿ ಶಾಂತಿ ಸಭೆ

ನಾಡಿದ್ದು ಬಕ್ರೀದ್ ಹಬ್ಬ  ಮಲೇಬೆನ್ನೂರಿನಲ್ಲಿ ಶಾಂತಿ ಸಭೆ

ಮಲೇಬೆನ್ನೂರು, ಜೂ.26- ಯಾವುದೇ ಧಾರ್ಮಿಕ ಹಬ್ಬಗಳಾಗಲೀ ನಾವು ಸಾರ್ವಜನಿಕರ ರಕ್ಷಣೆಗೆ ಸದಾ ಸಿದ್ಧರಿದ್ದೇವೆ. ಹಬ್ಬಗಳನ್ನು ಸಡಗರ, ಸಂಭ್ರಮ, ಸಂತೋಷದ ಜೊತೆಗೆ ಸಾಮರಸ್ಯದಿಂದ ಆಚರಿಸುವಂತಾಗಬೇಕು ಎಂದು ಹರಿಹರ ವೃತ್ತ ನಿರೀಕ್ಷಕ ಸತೀಶ್ ತಿಳಿಸಿದರು.

ಇದೇ ದಿನಾಂಕ 29ರ ಶುಕ್ರವಾರ ಜರುಗಲಿರುವ ಬಕ್ರೀದ್ ಹಬ್ಬದ ಆಚರಣೆ ಪ್ರಯುಕ್ತ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಪೊಲೀಸ್ ನೈತಿಕಗಿರಿಗೆ ಅವಕಾಶವಿರುವುದಿಲ್ಲ. ನಂದಿಗುಡಿ ಬಳಿ ಚೆಕ್‍ಪೋಸ್ಟ್ ಹಾಕಲಾಗುವುದು ಮತ್ತು ಸಿಬ್ಬಂದಿಗಳು ವಿಶೇಷವಾಗಿ ಗಸ್ತು ಹಾಕುತ್ತಿರುತ್ತಾರೆ. ಆದ್ದರಿಂದ ಸಾರ್ವಜನಿಕರು ಯಾವುದೇ ಗಾಳಿಮಾತಿಗೆ ಕಿವಿಕೊಡದೇ ಇಲಾಖೆಯ 112 ನಂಬರಿಗೆ ಅಥವಾ ಹತ್ತಿರದ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದರು.

ಪುರಸಭೆ ಸದಸ್ಯರಾದ ನಯಾಜ್, ಭೋವಿ ಶಿವು, ಹನುಮಂತಪ್ಪ ಮಾತನಾಡಿ, ಪಟ್ಟಣಕ್ಕೆ ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ಸಿಸಿ ಕ್ಯಾಮರಾ ಹಾಕಿಸಲಾಗಿದೆ. ಆದರೆ, ಅವುಗಳಲ್ಲಿ ಕೆಲವು ಕಾರ್ಯನಿರ್ವಹಿಸುತ್ತಿಲ್ಲ. ಅಂತಹ ಕ್ಯಾಮರಾಗಳನ್ನು ಶೀಘ್ರವಾಗಿ ಸರಿಪಡಿಸಿಕೊಂಡಲ್ಲಿ ಪಟ್ಟಣದ ಶಾಂತಿ, ಸುವ್ಯವಸ್ಥೆಗೆ ಅನುಕೂಲವಾಗಲಿದೆ ಎಂದರು.

ಪುರಸಭೆ ಸದಸ್ಯ ಶಬ್ಬೀರ್ ಖಾನ್, ಮುತುವಲ್ಲಿಗಳಾದ ಸೈಯದ್ ಅಕ್ರಂ, ಅಮ್ಜದ್ ಅಲಿ, ಮುಖಂಡರಾದ ಸೈಯದ್ ಸಾಬೀರ್ ಅಲಿ, ರೋಷನ್, ಜಯಣ್ಣ, ಎಳೆಹೊಳೆ ಕುಮಾರ್ ಮತ್ತು ಸಾರ್ವಜನಿಕರು ಸಭೆಯಲ್ಲಿ ಇದ್ದರು.

ಪಿಎಸ್‍ಐ ಪ್ರಭು ಕೆಳಗಿನಮನೆ ಸ್ವಾಗತಿಸಿದರು. ಎಎಸ್ಐ ಶ್ರೀನಿವಾಸ್ ವಂದಿಸಿದರು.

error: Content is protected !!