ಹರಿಹರ : ಎಸ್‌ಜೆವಿಪಿ ಕಾಲೇಜಿನಲ್ಲಿ ವಿಚಾರ ಸಂಕಿರಣ
ಹರಿಹರ, ಜೂ. 25- ಬೌದ್ಧಿಕ ಆಸ್ತಿ (ಐ.ಪಿ) ಎಂಬುದು ಮಾನವನ ಬುದ್ಧಿ ಶಕ್ತಿಯ ಅಮೂರ್ತ ಸೃಷ್ಟಿಯನ್ನು ಒಳಗೊಂಡಿರುವ ಆಸ್ತಿಯ ಒಂದು ವರ್ಗವಾಗಿದೆ. ಇದು ಆವಿಷ್ಕಾರ, ಸಾಹಿತ್ಯ ಮತ್ತು ಕಲಾತ್ಮಕ ಕೆಲಸಗಳು, ವಿನ್ಯಾಸಗಳು ಮತ್ತು ಚಿಹ್ನೆಗಳು, ಹೆಸರುಗಳ ಮತ್ತು ಚಿತ್ರಗಳಂತಹ ಮನಸ್ಸಿನ ಸೃಷ್ಟಿಯನ್ನು ಸೂಚಿಸುತ್ತದೆ ಎಂದು ಮಂಗಳೂರಿನ ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಸಂತೋಷ ಪ್ರಭು ಹೇಳಿದರು.
ಅವರು ಇಲ್ಲಿನ ಎಸ್‌ಜೆವಿಪಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಐ.ಪಿ.ಆರ್. ವಿಷಯದ ಕುರಿತು ನಡೆದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾ ಟಿಸಿ ಮಾತನಾಡುತ್ತಾ, ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನ ಮೆದುಳಿನಲ್ಲಿನ ಬರುವ ವಿಶೇಷ ಆಲೋಚನೆಗಳನ್ನು ಸದ್ಬಳಕೆ ಮಾಡಿಕೊಂಡು ಏನನ್ನಾದರೂ ಸಾಧನೆ ಮಾಡಬಹುದು ಎಂದರು.
ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರಿನ ಕೆ.ಎಸ್.ಸಿ.ಎಸ್.ಟಿ ಕೋ-ಆರ್ಡಿನೇಟರ್ ಎಂ.ಜಿ. ನಾಗಾರ್ಜುನ್ ಮಾತನಾಡಿ, ವ್ಯಕ್ತಿಯು ತನ್ನಲ್ಲಿರುವ ಆಲೋಚನಾ ಶಕ್ತಿಗೆ ಒಂದು ರೂಪ ನೀಡಿ, ಹಕ್ಕು ಸ್ವಾಮ್ಯತೆ ಪಡೆದಾಗ ಅದನ್ನು ಪೇಟೆಂಟ್ ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು. ಇಂದಿನ ದಿನಮಾನಕ್ಕೆ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಆಲೋಚನಾ ಶಕ್ತಿಯನ್ನು ಬೆಳೆಸಿಕೊಳ್ಳಬಹದು ಎಂದು ತಮ್ಮ ವಿಸ್ತೃತವಾದ ಉಪನ್ಯಾಸ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಆರ್.ಟಿ. ಪ್ರಶಾಂತ್ ದುಗ್ಗತ್ತಿಮಠ್ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶಿವಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕರಾದ ಎನ್.ಎಂ.ತಿಪ್ಪೇಸ್ವಾಮಿ, ಐ.ಕ್ಯೂ.ಎ.ಸಿ.ಸಂಯೋಜಕ ಡಾ. ವೀರಣ್ಣ ಶೆಟ್ಟರ್, ಉಪನ್ಯಾಸಕರಾದ ಡಾ.ರಮೇಶ್ ಪರ್ವತಿ, ಡಾ. ದಿವಾಕರ್, ಭರಮಪ್ಪ, ವಿಶಾಲ್ ಬೆಂಚಳ್ಳಿ, ಅರುಣ್, ಪ್ರವೀಣ್, ಸಂತೋಷ್, ಶ್ರೀಮತಿ ರಶ್ಮಿ, ಶ್ರೀಮತಿ ಪ್ರಿಯಾಂಕ, ನಾಜಿಯಾ ಬೇಗಂ, ಮುಬಾಶಿರಾ ಮತ್ತಿತರರು ಉಪಸ್ಥಿತರಿದ್ದರು.