ಗ್ಯಾರಂಟಿ ಭರವಸೆ ನೀಡಿದರೂ ಸುಮ್ಮನೆ ಕೂರುವ ಹಾಗಿಲ್ಲ, ಹೋರಾಟ ಅನಿವಾರ್ಯ

ಗ್ಯಾರಂಟಿ ಭರವಸೆ ನೀಡಿದರೂ ಸುಮ್ಮನೆ  ಕೂರುವ ಹಾಗಿಲ್ಲ, ಹೋರಾಟ ಅನಿವಾರ್ಯ

ಬಿಸಿಯೂಟ ತಯಾರಕರ ರಾಜ್ಯ ಸಮಿತಿ ಸದಸ್ಯರ ಸಭೆಯಲ್ಲಿ ಮೈಸೂರು ಎಐಟಿಯುಸಿ ಜಿಲ್ಲಾಧ್ಯಕ್ಷ ಕಾಂ. ದೇವದಾಸ್

ದಾವಣಗೆರೆ, ಜೂ. 25 – ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರಿಗೆ 6000 ರೂ. ವೇತನ ನೀಡು ವುದಾಗಿ ಆರನೇ ಗ್ಯಾರಂಟಿಯ ಭರವಸೆ ನೀಡಿತ್ತು, ಕಾಂಗ್ರೆಸ್ ಪಕ್ಷ ಈಗ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಆದರೆ ಬಿಸಿಯೂಟ ತಯಾರಕರಿಗೆ 6ನೇ ಗ್ಯಾರಂಟಿಯಾಗಿ ಭರವಸೆ ನೀಡಿದಂತೆ ಬರುವ ಜುಲೈ 7 ನೇ ತಾರೀಖು ರಾಜ್ಯ ಕಾಂಗ್ರೆಸ್ ಸರ್ಕಾರ ಮಂಡಿಸುವ ಬಜೆಟ್ ನಲ್ಲಿ ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸಿ ಜಾರಿ ಮಾಡುತ್ತಾರೆಂದು ಬಿಸಿಯೂಟ ತಯಾರಕರು ನಂಬಿ ಕೂರುವ ಹಾಗಿಲ್ಲ ಎಂದು ಮೈಸೂರು ಎಐಟಿಯುಸಿ ಜಿಲ್ಲಾಧ್ಯಕ್ಷ ಕಾಂ. ದೇವದಾಸ್ ಹೇಳಿದರು.

ಮೈಸೂರಿನ ಎಐಟಿಯುಸಿ ಕಚೇರಿಯಲ್ಲಿ ನಿನ್ನೆ ನಡೆದ ಬಿಸಿಯೂಟ ತಯಾರಕರ ರಾಜ್ಯ ಸಮಿತಿ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಎಐಟಿಯುಸಿ ರಾಷ್ಟ್ರೀಯ ಉಪಾಧ್ಯಕ್ಷ ಎಚ್.ಎಚ್.ಆರ್ ಶೇಷಾದ್ರಿ ಮಾತನಾಡಿ, ಬಿಸಿಯೂಟ ತಯಾರಕರು ಸೇರಿದಂತೆ ಎಲ್ಲಾ ವಲಯದ ಅಸಂಘಟಿತ ಕಾರ್ಮಿಕರು ಕನಿಷ್ಠ ವೇತನ ಜಾರಿಯಾಗುವವರೆಗೂ ಸರ್ಕಾರದ ವಿರುದ್ಧ ಹೋರಾಟ ಮುಂದುವರೆಸಬೇಕೆಂದು ಕರೆ ಕೊಟ್ಟರು.

ಸಂಘಟನೆಯ ರಾಜ್ಯ ಅಧ್ಯಕ್ಷ ಕಾಂ. ಹೊನ್ನಪ್ಪ ಮರೆಮ್ಮನವರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಖಜಾಂಚಿ ಕಾಂ. ರುದ್ರಮ್ಮ ಬೆಳಲಗೆರೆ, ಮೈಸೂರು ಜಿಲ್ಲೆ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಕಾಂ. ಸೋಮರಾಜೇ ಅರಸ್, ಮೈಸೂರು ಜಿಲ್ಲಾ ಬಿಸಿಯೂಟ ಸಂಚಾಲಕ ಕಾಂ. ಶಿವಣ್ಣ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿದ್ದರು. 

ಬಿಸಿ ಊಟ ತಯಾರಕರ ಫೆಡರೇಶನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಿಸಿಯೂಟ ತಯಾರಕರ ಸಂಘಟನೆಯ ರಾಜ್ಯ ಸಂಚಾಲಕ ಕಾಂ. ಜಿ.ಡಿ. ಪೂಜಾರ್ ವಂದಿಸಿದರು.

error: Content is protected !!