ಗೃಹ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಗೆ ಒತ್ತಾಯ

ಗೃಹ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಗೆ ಒತ್ತಾಯ

ದಾವಣಗೆರೆ, ಜೂ. 21-  ಗೃಹ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆ, ಕನಿಷ್ಠ ವೇತನ, ಸೂಕ್ತ ಭದ್ರತೆ, ರಜೆ ಸೌಲಭ್ಯ ಸೇರಿದಂತೆ, ಇತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂಬುದು ಗೃಹ ಕಾರ್ಮಿಕರ ಒತ್ತಾಸೆಯಾಗಿದೆ.

ನಗರದ ರೋಟರಿ ಬಾಲಭವನದಲ್ಲಿ ಅಂತರರಾಷ್ಟ್ರೀಯ ಗೃಹ ಕಾರ್ಮಿಕರ ವೃತ್ತಿ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ `ಅಂತರರಾಷ್ಟ್ರೀಯ ಗೃಹ ಕಾರ್ಮಿಕರ ದಿನಾ ಚರಣೆ’ ಕಾರ್ಯಕ್ರಮದಲ್ಲಿ ಗೃಹ ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡರು.

ಸಾಮಾಜಿಕ ಭದ್ರತಾ ಕಲ್ಯಾಣ ಕ್ರಮಗಳನ್ನು ಗೃಹ ಕಾರ್ಮಿಕರಿಗೂ ವಿಸ್ತರಿಸಬೇಕು. ಗೃಹ ಕಾರ್ಮಿಕರ ಅಗತ್ಯತೆಗಳನ್ನು ಪೂರೈಸಲು ನಿಧಿಯೊಂದಿಗೆ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಬೇಕು. ಕನಿಷ್ಠ ವೇತನ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಕಾರ್ಮಿಕ ಇಲಾಖೆಯ ಸಿಬ್ಬಂದಿ ಗೋಪಾಲಸ್ವಾಮಿ ಅವರು, ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಮತ್ತು ಇತರೆ ಕಾರ್ಮಿಕರಿಗೆ ಇರುವ ಸವಲತ್ತುಗಳನ್ನು ತಿಳಿಸಿದರು.

ಗೃಹ ಕಾರ್ಮಿಕರ ಪರವಾಗಿ ಸುಜಾತ ಮಾತನಾಡಿ, ಮನೆ ಕೆಲಸ ಮಾಡುವವರಿಗೆ ಮಾಲೀಕರು ರಜೆ ಸೌಲಭ್ಯ ನೀಡಬೇಕು. ಕಾರ್ಮಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಕೀಳಾಗಿ ಕಾಣಬಾರದು ಎಂದು ಹೇಳಿದರು.

ಸಂಘಟಕರ ಪರವಾಗಿ ನಾಗಮ್ಮ ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಮಾದರಿಯಲ್ಲಿ ಗೃಹ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ಸರ್ಕಾರದಿಂದ ಸಿಗಬಹುದಾದ ಸವಲತ್ತುಗಳನ್ನು ಗೃಹ ಕಾರ್ಮಿಕರಿಗೂ ನೀಡಬೇಕು. ಮನೆಗಳಲ್ಲಿ ಆದ ಕಳ್ಳತನಗಳ ಆರೋಪಗಳನ್ನು ಗೃಹ ಕಾರ್ಮಿಕರ ಮೇಲೆ ಮಾಡುವುದು ಸರಿಯಲ್ಲ. ಗೌರವ ನೀಡಬೇಕು. ರಜೆ ಸೌಲಭ್ಯ ನೀಡುವಂತೆ ಆಗ್ರಹಿಸಿದರು.

ಅಸಂಘಟಿತ ವಲಯದಲ್ಲಿರುವ ನಮಗೆ ಸೂಕ್ತ ಭದ್ರತೆ ಇಲ್ಲ. ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ಮಾಡಿಸಿದ್ದರೂ ಇದುವರೆಗೂ ಯಾವುದೇ ಸೌಲಭ್ಯವನ್ನು ಪಡೆಯಲು ಸಾಧ್ಯವಾಗಿಲ್ಲ ಎಂದರು.

ಸತ್ತ ಮೇಲೆ ವಿಮೆ ನೀಡುವ ಬದಲು, ಜೀವಂತವಾಗಿರುವಾಗಲೇ ಗೃಹ ಕಾರ್ಮಿಕರಿಗೆ ಮತ್ತು ಅವರ ಮಕ್ಕಳಿಗೆ ಅನುಕೂಲವಾಗುವ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಗೃಹ ಕಾರ್ಮಿಕರ ಚಳವಳಿ ಸಹ ಸಂಯೋಜಕಿ ಸಿಸ್ಟರ್ ನಿಶಾ, ಕೆಡಿಡಬ್ಲ್ಯುಎಂ ಸಹ ಸಂಯೋಜಕ ಬ್ರದರ್ ಜರ್ಸನ್, ಕಾರ್ಮಿಕ ಬಂಧು ಶಿಲ್ಪಾ, ವಿ. ಲಕ್ಷ್ಮೀ, ಮಹಾನಗರ ಪಾಲಿಕೆ 31 ನೇ ವಾರ್ಡ್ ಮುಖಂಡರಾದ ಪಿ.ಎಸ್. ನಾಗರಾಜ್, ಉಷಾ, ಬಸಮ್ಮ, ದುಗ್ಗಮ್ಮ, ಚಿತ್ರಾ, ಬಿಜೆಪಿ ಮುಖಂಡ ಬೊಮ್ಮಣ್ಣ, ನಳಿನಿ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!