ಹಣ, ಅಂತಸ್ತು ಇದ್ದವರು ಶ್ರೀಮಂತರಲ್ಲ ದೈಹಿಕ, ಮಾನಸಿಕ ಆರೋಗ್ಯ ಇದ್ದವರು ನಿಜವಾದ ಶ್ರೀಮಂತರು

ಹಣ, ಅಂತಸ್ತು ಇದ್ದವರು ಶ್ರೀಮಂತರಲ್ಲ ದೈಹಿಕ, ಮಾನಸಿಕ ಆರೋಗ್ಯ ಇದ್ದವರು ನಿಜವಾದ ಶ್ರೀಮಂತರು

ಹರಪನಹಳ್ಳಿ, ಜೂ.21- ಹಣ, ಅಂತಸ್ತು ಇದ್ದವರು ಶ್ರೀಮಂತರಲ್ಲ. ದೈಹಿಕ, ಮಾನಸಿಕ ಆರೋಗ್ಯ ಇದ್ದವರು ನಿಜವಾದ ಶ್ರೀಮಂತರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಸ್.ಷಣ್ಮುಖನಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯವನ್ನು ಸ್ವಸ್ಥವಾಗಿಡುವ ಮನದ ಸ್ಥಿತಿಯೇ ಯೋಗ. ಸರ್ವ ರೋಗಗಳ ಗುಣಪಡಿಸುವ ಶಕ್ತಿ ಯೋಗಕ್ಕಿದೆ. ಹಿಂದಿನ ಕಾಲದಲ್ಲಿ ಜನ ಸಾಕಷ್ಟು ಕೆಲಸ ಮಾಡುತ್ತಿದ್ದರು. ಆದರೆ ಇಂದು ಕೆಲಸ ಕಡಿಮೆ ಆಗಿ ಬರೀ ಮಿಷನ್‌ಗಳನ್ನು ಅಳವಡಿಸಿಕೊಂಡು ನಾನಾ ರೋಗಗಳಿಗೆ ತುತ್ತಾಗುತ್ತಿದ್ದು, ಪ್ರತಿಯೊಬ್ಬರಿಗೂ ಯೋಗ ಅವಶ್ಯವಾಗಿದೆ. ಯೋಗ ಕೇವಲ ದಿನಾಚರಣೆಗೆ ಸೀಮಿತವಾಗಬಾರದು, ನಿತ್ಯವೂ ಅಭ್ಯಾಸ ಮಾಡಬೇಕು. ಸದೃಢ ದೇಹದಲ್ಲಿ ಸದೃಢ ಮನಸ್ಸಿನ ನಿರ್ಮಾಣಕ್ಕೆ ಯೋಗಾಸನಗಳು ಸಹಕಾರಿ ಆಗುತ್ತವೆ ಎಂದರು.

ದೈಹಿಕ ನಿರ್ದೇಶಕ  ಎಚ್.ಕೊಟ್ರೇಶ್ ಮಾತನಾಡಿ,  ಮನುಷ್ಯನ ಜೀವನದಲ್ಲಿ ಆರೋಗ್ಯ ತುಂಬಾ ಮುಖ್ಯ. ಮಾನಸಿಕ ಮತ್ತು ದೈಹಿಕ  ಆರೋಗ್ಯಕ್ಕೆ ಯೋಗ ಅತ್ಯಂತ ಅವಶ್ಯಕವಾಗಿದೆ. ಯೋಗವನ್ನು ಮಾಡದವನು ಅಯೋಗ್ಯ ಎಂಬ ಭಾವನೆ ಎಲ್ಲರಲ್ಲೂ ಮೂಡುತ್ತದೆ. ಯೋಗ ಒಂದು ಉದ್ಯಮವಾಗಿ ಬೆಳೆಯುತ್ತಿದ್ದು, ಈ ಉದ್ಯಮ ಉದ್ಯಮಗಳಂತೆ ಲಾಭವೇ ಇದರ ಉದ್ಧೇಶವಾಗಬಾರದು ಎಂದರು.

ಯೋಗ ಶಿಕ್ಷಕ ಲೋಕೇಶ್, ಉಪನ್ಯಾಸಕರಾದ ನಾಗರಾಜ್, ಕೆ.ಸತೀಶ್, ಶಂಭುಲಿಂಗಪ್ಪ, ಗ್ರಂಥಪಾಲಕರಾದ ನಾಗರತ್ನ ಹೊಸಮನಿ ಸೇರಿದಂತೆ ಇತರರು ಇದ್ದರು.

error: Content is protected !!