ಮೊದಲ ದಿನವೇ ಎಡವಿದ ಗೃಹ ಜ್ಯೋತಿ ಸರ್ವರ್

ಮೊದಲ ದಿನವೇ ಎಡವಿದ ಗೃಹ ಜ್ಯೋತಿ ಸರ್ವರ್

ದಾವಣಗೆರೆ, ಜೂ. 18 – ಗೃಹ ಜ್ಯೋತಿ ಯೋಜನೆಯಡಿ 200 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸ್ವೀಕಾರದ ಮೊದಲ ದಿನವೇ ಸರ್ವರ್ ಸಮಸ್ಯೆ ಕಾಡಿತು.

ಬೆಳಿಗ್ಗೆ 11 ಗಂಟೆಯಿಂದ ಸೇವಾಸಿಂಧು ವೆಬ್ ತಾಣದ ಮೂಲಕ ಅರ್ಜಿ ಸ್ವೀಕರಿಸುವುದಾಗಿ ತಿಳಿಸಲಾಗಿತ್ತು. ಆದರೆ, ಮಧ್ಯಾಹ್ನ 12.30ರ ನಂತರವೇ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ದಾವಣಗೆರೆ ಒನ್ ಕೇಂದ್ರಗಳಲ್ಲಿ ಅರ್ಜಿ ಸ್ವೀಕಾರ ಸಾಧ್ಯವಾಯಿತು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಪಿ.ಜೆ. ಬಡಾವಣೆಯ ಸೂಪರ್‌ಮಾರ್ಕೆಟ್ ಸೇರಿದಂತೆ ಹಲವಾರು ಕೇಂದ್ರಗಳಲ್ಲಿ ವೆಬ್ ಸೈಟ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಜನರಿಗೆ ಹೇಳಿ ವಾಪಸ್ ಕಳಿಸುತ್ತಿರುವುದು ಕಂಡು ಬಂತು. ಅರ್ಜಿ ಸಲ್ಲಿಸಲು ಬಂದವರು ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದುದು ಕಂಡು ಬಂತು.

https://sevasindhugs.karnataka.gov.in/ ವೆಬ್ ತಾಣದಲ್ಲಿ ಸಾರ್ವಜನಿಕರು ಮಧ್ಯಾಹ್ನ 3 ಗಂಟೆ ನಂತರ ಅರ್ಜಿ ಸಲ್ಲಿಸಬಹುದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಆದರೆ, ಸಂಜೆ 6 ಗಂಟೆ ನಂತರ ಈ ವೆಬ್ ತಾಣದ ಕಾರ್ಯನಿರ್ವಹಣೆ ಆರಂಭವಾಯಿತು. ಆನಂತರವೂ ಸರ್ವರ್ ಸಮಸ್ಯೆ ಕಾಡುತ್ತಲೇ ಇತ್ತು. ಬೆಸ್ಕಾಂ ಸಹಾಯವಾಣಿಯಾದ 1912 ಸಹ ಸಾಕಷ್ಟು ಬ್ಯುಸಿ ಆಗಿದ್ದುದು ಕಂಡು ಬಂತು.

ದಿನವಿಡೀ ವೆಬ್ ತಾಣ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಮೊದಲ ದಿನ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಕಡಿಮೆ ಇತ್ತು. ಮೊದಲ ದಿನ ಸಂಜೆ 6ರವರೆಗೆ ಜಿಲ್ಲೆಯಲ್ಲಿ 6908 ಅರ್ಜಿಗಳು ಸಲ್ಲಿಕೆಯಾಗಿವೆ. ರಾಜ್ಯದಲ್ಲಿ 55 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ.

ಅರ್ಜಿ ಸಲ್ಲಿಸಲು ಆಧಾರ್ ಸಂಖ್ಯೆ, ವಿದ್ಯುತ್ ಬಿಲ್‌ನಲ್ಲಿ ನೀಡಲಾದ ವಿದ್ಯುತ್ ಖಾತೆ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಬೇಕಿದೆ. 

ಸಿಗದ ಸ್ಪಷ್ಟನೆ : ಪ್ರಸಕ್ತ ವೆಬ್ ಸೈಟ್ ಮೂಲಕ ಗ್ರಾಹಕರ ವಿದ್ಯುತ್ ಖಾತೆ ಸಂಖ್ಯೆ, ಆಧಾರ್ ಹಾಗೂ ಮೊಬೈಲ್ ಮಾಹಿತಿ ಮಾತ್ರ ಪಡೆಯಲಾಗುತ್ತಿದೆ. ಮಾಲೀಕತ್ವದ ದಾಖಲೆ ಇಲ್ಲವೇ ಬಾಡಿಗೆ ಕರಾರು ಪತ್ರದ ದಾಖಲೆಗಳನ್ನು ಪಡೆಯುತ್ತಿಲ್ಲ. ಹೀಗಾಗಿ ಈ ದಾಖಲೆಗಳ ಸಲ್ಲಿಕೆ ಹಾಗೂ ಪರಿಶೀಲನೆ ಯಾವ ರೀತಿ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಹೇಳಿದ್ದಾರೆ.

ಹಲವರು ಮನೆ ಖರೀದಿಸಿದ ನಂತರವೂ ಹಿಂದಿನ ಮಾಲೀಕರ ಹೆಸರಿನಲ್ಲೇ ಬಿಲ್ ಕಟ್ಟುತ್ತಿದ್ದಾರೆ. ಇನ್ನು ಕೆಲವರ ಖಾತೆಗಳು ತಂದೆ ಇಲ್ಲವೇ ತಾತನ ಹೆಸರಿನಲ್ಲಿವೆ. ಅವರು ಮೃತಪಟ್ಟ ನಂತರವೂ ವಿದ್ಯುತ್ ಖಾತೆಯನ್ನು ವರ್ಗಾಯಿಸಿಕೊಂಡಿಲ್ಲ. 

ಒಂದೇ ನಿವೇಶನವನ್ನು ಕುಟುಂಬದವರು ಬೇರೆ ಬೇರೆ ಮನೆಯಾಗಿ ವಿಭಜಿಸಿಕೊಂಡಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ ಇನ್ನೂ ಸ್ಪಷ್ಟನೆ ಸಿಗಬೇಕಿದೆ ಎಂದವರು ಹೇಳಿದ್ದಾರೆ. 

ಇನ್ನು ಕೆಲವರ ಹೆಸರುಗಳು ಆಧಾರ್ ಕಾರ್ಡ್‌ನಲ್ಲಿ ಒಂದು ರೀತಿ ಹಾಗೂ ವಿದ್ಯುತ್ ಖಾತೆಗಳಲ್ಲಿ ಮತ್ತೊಂದು ರೀತಿ ಇದೆ. ಈ ಎಲ್ಲ ವಿಷಯಗಳು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ.

error: Content is protected !!