ಕನ್ನಡ – ಸಂಸ್ಕೃತಿ ಇಲಾಖೆಗೆ 150 ಕೋಟಿ ಅನುದಾನ ನೀಡಲು ಸಿಎಂಗೆ ಒತ್ತಾಯ

ಕನ್ನಡ – ಸಂಸ್ಕೃತಿ ಇಲಾಖೆಗೆ 150 ಕೋಟಿ   ಅನುದಾನ ನೀಡಲು ಸಿಎಂಗೆ ಒತ್ತಾಯ

ಅಖಿಲ ಕರ್ನಾಟಕ ದ್ವಿತೀಯ ಮಹಿಳಾ ಯುವ ಸಮ್ಮೇಳನದಲ್ಲಿ  ಕೆಪಿಸಿಸಿ ರಾಜ್ಯ ವಕ್ತಾರ ಮಹಾಂತೇಶ್ ಹಟ್ಟಿ

ದಾವಣಗೆರೆ, ಜು. 18- ನೂತನ ಕಾಂಗ್ರೆಸ್ ಸರ್ಕಾರದಿಂದ ಮಂಡಿಸುವ ಬಜೆಟ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 150 ಕೋಟಿ ರೂ. ಅನುದಾನ ನೀಡಲು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲಾಗುವುದು ಎಂದು ಕೆಪಿಸಿಸಿ ರಾಜ್ಯ ವಕ್ತಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ಮಹಾಂತೇಶ್ ಹಟ್ಟಿ ಹೇಳಿದರು.

ಕನಕಶ್ರೀ ಪ್ರಕಾಶನ ಬ್ಯಾಕೂಡ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ನಗರದ ರಂಗಮಹಲ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಖಿಲ ಕರ್ನಾಟಕ ದ್ವಿತೀಯ ಮಹಿಳಾ ಯುವ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಂಬರುವ 5ನೇ ತಾರೀಖು ಬಜೆಟ್ ಪೂರ್ವಭಾವಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ನಾನೂ ಸಹ ಭಾಗವಹಿಸಲಿದ್ದೇನೆ. ಈ ವೇಳೆ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಒತ್ತಾಯಿಸುತ್ತೇನೆ. ಅಲ್ಲದೆ ಉತ್ತರ ಕರ್ನಾಟಕ ಕಲಾವಿದರ ನೋವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೂ, ಮುಖ್ಯಮಂತ್ರಿಗಳಿಗೂ ಮನದಟ್ಟು ಮಾಡುತ್ತೇನೆ ಎಂದು ಹೇಳಿದರು.

ಹೊಸ ಕಲಾವಿದರನ್ನು ಪ್ರೋತ್ಸಾಹಿಸುವುದು ನಮ್ಮ ಧರ್ಮ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇಲಾಖೆಯ ಯೋಜನೆಗಳನ್ನು ಕಲಾವಿದರು ಸದ್ಭಳಕೆ ಮಾಡಿಕೊಳ್ಳಬೇಕು.  ಇಲಾಖೆಗೆ ಅರ್ಜಿ ಸಲ್ಲಿಸಿ ಕಲಾವಿದರು ಮಾಸಾಶನ ಪಡೆದುಕೊಳ್ಳಬೇಕು. ಹಲವಾರು ವರ್ಷಗಳಿಂದಲೂ ಅರ್ಜಿ ಸಲ್ಲಿಸಿ ಮಾಸಾಶನ ಸಿಗದೆ ಅನ್ಯಾಯವಾಗಿದ್ದರೆ ನಮ್ಮನ್ನು ಸಂಪರ್ಕಿಸಿದಲ್ಲಿ ನ್ಯಾಯ ನೀಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್  ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ಮಾತನಾಡಿ, ಮಹಿಳೆಯನ್ನು ಸಮಾನತೆಯಿಂದ ನೋಡುವ ಕಾರ್ಯ ಮನೆಗಳಿಂದಲೇ ಆರಂಭವಾಗಬೇಕು. ಲಿಂಗ ತಾರತಮ್ಯ ಮಹಿಳೆಯರಿಂದಲೇ ಹೆಚ್ಚಾಗುತ್ತಿದೆ. ಈ ಮನಸ್ಥಿತಿ ಬದಲಾಗಬೇಕಿದೆ ಎಂದರು.

ಈಗಾಗಲೇ ಗಂಡು ಹಾಗೂ ಹೆಣ್ಣಿನ ಅನುಪಾತದಲ್ಲಿ ಸಾಕಷ್ಟು ಏರುಪೇರು ಉಂಟಾಗಿದೆ. ಆದಾಗ್ಯೂ ದೇಶದಲ್ಲಿ ಪ್ರತಿ ದಿನಕ್ಕೆ 600 ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ  ಮಹಿಳೆಯರ ಅಸುರಕ್ಷತೆ ಹೆಚ್ಚಾಗುತ್ತದೆ. ಗಂಡಿನಷ್ಟೇ ಸಮಾನವಾಗಿ ಹೆಣ್ಣಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿದರೆ ಅವಳು ಸಮಾಜ ಹಾಗೂ ದೇಶದ ಆಸ್ತಿಯಾಗುತ್ತಾಳೆ ಎಂದರು.

ಮಹಿಳೆ ಇಂದು ಆಟೋರಿಕ್ಷಾದಿಂದ ಅಂತರಿಕ್ಷದವರೆಗೂ, ಮನೆಯಂಗಳದಿಂದ ಮಂಗಳನ ಅಂಗಳದವರೆಗೂ ಕಾಲಿಟ್ಟದ್ದಾಳಾದರೂ ಅವಳ ಮೇಲಿನ ದೌರ್ಜನ್ಯಗಳು ಕಡಿಮೆಯಾಗಿಲ್ಲ. ವರದಕ್ಷಿಣೆ ಪಿಡುಗು ಇಂದಿಗೂ ಸಮಾಜವನ್ನು ಕಾಡುತ್ತಿದೆ. ಮಹಿಳೆ ಸಂರಕ್ಷಣೆಗಾಗಿ ಇರುವ ಕಾನೂನು ಹಲ್ಲು ಕಿತ್ತ ಹಾವಿನಂತಾಗಿದೆ.  ಜಗದ ಜ್ಯೋತಿಯಾಗಬೇಕಾಗಿದ್ದ ಹೆಣ್ಣು ಇಂದು ಸಂಕಷ್ಟದ ಸರಮಾಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ ಎಂದು ಬೇಸರ ವ್ಯಕ್ತಪಡಿಸುತ್ತಾ, ಮಹಿಳೆಯರನ್ನು ಮುಖ್ಯವಾಹಿನಿಗೆ ತರುವಂತಹ ಸಂಘ-ಸಂಸ್ಥೆಗಳ ಕಾರ್ಯ ಶ್ಲ್ಯಾಘನೀಯ ಎಂದರು.

ಬಂಜಾರ ಗುರು ಪೀಠದ ಶ್ರೀ ಬಸವ ಸೇವಾ ಸರ್ದಾರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಯುವ ಸಾಹಿತಿ ರೇಷ್ಮಾ ಶೆಟ್ಟಿ ಗೊರೂರು ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಕನಕಶ್ರೀ ಪ್ರಕಾಶನ ಬ್ಯಾಕೂಡದ ಅಧ್ಯಕ್ಷ ಸಿದ್ರಾಮ ಎಂ. ನಿಲಜಗಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಕೆ.ಎನ್. ಶೈಲಜಾ, ಸಾಧನ ವೃದ್ಧಾಶ್ರಮ ಮತ್ತು ಅನಾಥಾಶ್ರಮದ ರಾಜ್ಯಾಧ್ಯಕ್ಷರಾದ ಡಾ.ಪುಷ್ಪಲತಾ  ಪವಿತ್ರರಾಜ್, ಸಮಾಜ ಸೇವಕರಾದ ಕವಿತಾ ಬಿ.ಜೆ., ಶಿಕ್ಷಣ ಇಲಾಖೆಯ ರೇವಣಸಿದ್ದಪ್ಪ ಅಂಬಿಗರ, ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ಡಾ.ಬಸವರಾಜ ಗವಿಮಠ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಿಂತಕ ಎಸ್.ಹೆಚ್. ಹೂಗಾರ, ನಿವೃತ್ತ ಯೋಧ ಸುರೇಶ್ ರವಾ ಹೆಚ್., ಡಾ.ಬುರುಡೇಕಟ್ಟಿ ಮಂಜಪ್ಪ ಇತರರು ಉಪಸ್ಥಿತರಿದ್ದರು.

ಸಾಹಿತಿ ಡಾ.ಜೆ.ಎಂ. ಬಾದಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸುಮಾ ಬ.ಹಡಪದ ಸಮ್ಮೇಳನದ ಅಧ್ಯಕ್ಷರ ಪರಿಚಯ ಮಾಡಿಕೊಟ್ಟರು. ಸುಮಾ ಪ್ರಾರ್ಥಿಸಿದರು. ಕು.ಸನ್ನಿಧಿ ಸ್ವಾಗತ ನೃತ್ಯ ಪ್ರದರ್ಶಿಸಿದರು.

error: Content is protected !!