ಸತೀಶ್‌ ಜಾರಕಿಹೊಳಿ ಸಿಎಂ ಆಗಲು ಪಕ್ಷಾತೀತ ಬೆಂಬಲಕ್ಕೆ ಕರೆ

ಸತೀಶ್‌ ಜಾರಕಿಹೊಳಿ ಸಿಎಂ ಆಗಲು ಪಕ್ಷಾತೀತ ಬೆಂಬಲಕ್ಕೆ ಕರೆ

ಮಲೇಬೆನ್ನೂರು, ಜೂ.18- ಶೋಷಿತ ಸಮುದಾಯಗಳ ನಾಯಕನಾಗಿ ಬೆಳೆದಿರುವ ವಾಲ್ಮೀಕಿ ನಾಯಕ ಸಮಾಜದ ಸತೀಶ್‌ ಜಾರಕಿಹೊಳಿ ಅವರಿಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇದ್ದು, ಅವರಿಗೆ ನಮ್ಮ ಸಮಾಜದವರು ಪಕ್ಷಾತೀತವಾಗಿ ಬೆಂಬಲ ನೀಡಬೇಕೆಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಸಮಾಜದ ನೂತನ ಸಚಿವರು, ಶಾಸಕರಿಗೆ ಇಂದು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಆದರೆ ಸಕ್ರೀಯ ರಾಜಕಾರಣದಲ್ಲಿದ್ದು, ಸತೀಶ್‌ ಜಾರಕಿಹೊಳಿ ಅವರನ್ನು ಸಿಎಂ ಮಾಡಲು ಶ್ರಮಿಸುತ್ತೇನೆ. ಬದುಕಿರುವವರೆಗೂ ಶೋಷಿತರ, ಧ್ವನಿ ಇಲ್ಲದವರ ಪರವಾಗಿ ಹೋರಾಟ ಮಾಡುತ್ತೇನೆ. ಸಮಾಜದ ವಿಚಾರದಲ್ಲಿ ಪಕ್ಷ ಬೇಡ. ಸೋತವರು, ಗೆದ್ದವರು ಒಂದಾಗಿ ಹೋಗೋಣ ಎಂದ ರಾಜಣ್ಣ ಅವರು, ನಾವು ಗುರಿ ಮತ್ತು ಗುರುಗಳನ್ನು ಸರಿಯಾಗಿ ಇಟ್ಟುಕೊಂಡರೆ, ನಾವು ಅಂದುಕೊಂಡದ್ದನ್ನು ಸಾಧಿಸಬಹುದೆಂದು ಜನರನ್ನು ಹುರಿದುಂಬಿಸಿದರು.

ನಮ್ಮ ಸಮಾಜಕ್ಕೆ ಸಂವಿಧಾನ ಬದ್ಧ ಹಕ್ಕು ಕಲ್ಪಿಸುವುದಕ್ಕಾಗಿ ಶ್ರೀಗಳು 388 ಕಿ.ಮೀ. ಪಾದಯಾತ್ರೆ ಮತ್ತು 253 ದಿನ ಧರಣಿ ಸತ್ಯಾಗ್ರಹ ಮಾಡಿದ್ದರ ಫಲವಾಗಿ ಹಿಂದಿನ ಸರ್ಕಾರ ಮೀಸಲಾತಿ ಹೆಚ್ಚಿಸುವ ತೀರ್ಮಾನ ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಮೀಸಲಾತಿ ಹೆಚ್ಚಳ ಮಾಡಿರುವುದನ್ನು 9ನೇ ಶೆಡ್ಯೂಲ್‌ಗೆ ಸೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ರಾಜ್ಯದ ಬಿಜೆಪಿ ನಾಯಕರೂ ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ತರಬೇಕೆಂದು ವೇದಿಕೆಯಲ್ಲಿದ್ದ ಸಂಸದ ದೇವೇಂದ್ರಪ್ಪ ಅವರಿಗೆ ಹೇಳಿದರು.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮಾತನಾಡಿ, ಜನರು ನಮ್ಮ ಹಾಗೂ ನಮ್ಮ ಸರ್ಕಾರದ ಮೇಲೆ ಬಹಳ ನಿರೀಕ್ಷೆ ಇಟ್ಟಿದ್ದಾರೆಂಬ ಅರಿವು ನಮಗಿದೆ. ಜೊತೆಗೆ ಸಮಾಜಕ್ಕೆ ನಮ್ಮಿಂದ ಏನೇನು ಕೆಲಸಗಳು ಆಗೇಕೆಂಬ ಬಗ್ಗೆಯೂ ಮಾಹಿತಿ ಇದೆ. ಹಕ್ಕುಗಳಿಗಾಗಿ ನಾವು ಮೊದಲಿನಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇವೆ. ಈಗ ನಮ್ಮ ಸರ್ಕಾರ ಬಂದಿರುವುದರಿಂದ ಹಂತ ಹಂತವಾಗಿ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದರು.

ಶ್ರೀಗಳ ಹೋರಾಟಕ್ಕೆ ಹೆದರಿ ಎಸ್ಸಿ-ಎಸ್ಟಿಗಳಿಗೆ ಮೀಸಲಾತಿ ಪ್ರಮಾಣವನ್ನು ಬಿಜೆಪಿ ಸರ್ಕಾರ ಹೆಚ್ಚಳ ಮಾಡಿದ್ದಾರೆಯೇ ಹೊರತು ನಮ್ಮ ಸಮಾಜದ ಮೇಲಿನ ಪ್ರೀತಿಯಿಂದಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ಸಮಾಜದ 20 ಜನ ವಾಟ್ಸಾಪ್‌ ಗಿರಾಕಿಗಳಿದ್ದು, ಸ್ವಾಮೀಜಿ ಅವರ ಜಾತಿ ಬಗ್ಗೆ ಮತ್ತು ಅವರ ಸಾಧನೆ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಇಂತಹ ಜನರ ಬಗ್ಗೆ ಸಮಾಜ ತಲೆಕೆಡಿಸಿಕೊಳ್ಳಬಾರದೆಂದು ಸತೀಶ್‌ ಜಾರಕಿಹೊಳಿ ಹೇಳಿದರು.

ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಮತ್ತು ಪರಿಶಿಷ್ಠ ಪಂಗಡಗಳ ಇಲಾಖೆ ಸಚಿವ ಬಿ. ನಾಗೇಂದ್ರ ಮಾತನಾಡಿ, ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸುವ ಚಿಂತನೆ ಇದೆ ಎಂದರು. ಎಸ್ಟಿಗೆ ಪ್ರತ್ಯೇಕ ಸಚಿವಾಲಯ ಹಿಂದಿನ ಸರ್ಕಾರದಲ್ಲಿ ಘೋಷಣೆಯಾಗಿದ್ದು, ಶೀಘ್ರವೇ ಕಾರ್ಯಾರಂಭ ಮಾಡುತ್ತೇವೆ ಎಂದು ಸಚಿವ ನಾಗೇಂದ್ರ ಹೇಳಿದರು.

ಬಳ್ಳಾರಿ ಸಂಸದ ಅರಸೀಕೆರೆ ದೇವೇಂದ್ರಪ್ಪ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಹೆಚ್‌.ಡಿ. ಕೋಟೆ ಶಾಸಕ ಅನಿಲ್‌ ಚಿಕ್ಕಮಾದು, ಜಗಳೂರು ಶಾಸಕ ಬಿ. ದೇವೇಂದ್ರಪ್ಪ, ಕೂಡ್ಲಿಗಿ ಶಾಸಕ ಡಾ. ಎನ್‌.ಟಿ. ಶ್ರೀನಿವಾಸ್‌, ಮಾಯಕೊಂಡ ಶಾಸಕ ಕೆ.ಎಸ್‌. ಬಸವಂತಪ್ಪ ಮಾತನಾಡಿದರು.

ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಸಂವಿಧಾನಬದ್ಧ ಹಕ್ಕುಗಳಿಗಾಗಿ ಸಮಾಜದ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಂದಾಗಬೇಕು. ಅಧಿಕಾರಕ್ಕೆ ಬಂದವರು ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಬದ್ಧರಾಗಿರಬೇಕೆಂದರು.

ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್‌ಗೆ ಸೇರಿಸಲು ಎಲ್ಲರೂ ಸೇರಿ ಕೇಂದ್ರದ ಮೇಲೆ ಒತ್ತಡ ಹಾಕಬೇಕು. ನಕಲಿ ಜಾತಿ ಪ್ರಮಾಣ ಪತ್ರ ತಡೆಗೆ ಮುಂದಾಗಬೇಕಾಗಿದ್ದ ಸರ್ಕಾರವೇ ಪ್ರೋತ್ಸಾಹ ನೀಡಿದ್ದು, ತುಂಬಾ ಬೇಸರದ ಸಂಗತಿಯಾಗಿದೆ. ಈ ವಿಚಾರದಲ್ಲಿ ಹಿಂದಿನ ಸಿಎಂ ಮಾಡಿದ್ದ ಆದೇಶವನ್ನು ಈ ಸರ್ಕಾರ ರದ್ದು ಮಾಡಬೇಕೆಂದು ಸ್ವಾಮೀಜಿ ಒತ್ತಾಯಿಸಿದರು.

ನಿವೃತ್ತ ಜಿಲ್ಲಾಧಿಕಾರಿ ಬಿ. ಶಿವಪ್ಪ ಅವರು ಸಮುದಾಯದ ಮುಂದಿನ ಸವಾಲುಗಳು ಹಾಗೂ ಪರಿಹಾರೋಪಾಯಗಳ ಕುರಿತು ಮಾತನಾಡಿದರು. ನಿವೃತ್ತ ಅಧಿಕಾರಿ ಕೆ.ಎಸ್‌. ಮೃತ್ಯುಂಜಯಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಬೇಡಿಕೆಗಳನ್ನು ಸಭೆಯ ಗಮನಕ್ಕೆ ತಂದರು.

ಶಾಸಕ ಬಿ.ಪಿ. ಹರೀಶ್‌, ಮಾಜಿ ಶಾಸಕ ಎಸ್‌. ರಾಮಪ್ಪ, ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಧರ್ಮದರ್ಶಿಗಳಾದ ಶ್ರೀಮತಿ ಶಾಂತಲಾ ರಾಜಣ್ಣ, ಶಾಂತ ಸುರಪುರ, ಕೆ.ಬಿ. ಮಂಜುನಾಥ್‌, ಮುಖಂಡ ರಾದ ಟಿ. ಈಶ್ವರ್‌, ಜಿ.ಟಿ. ಚಂದ್ರಶೇಖರಪ್ಪ, ಭಕ್ತ ರಾಮೇಗೌಡ, ಡಾ. ಎ.ಬಿ. ರಾಮಚಂದ್ರಪ್ಪ, ನಂದಿಗಾವಿ ಶ್ರೀನಿವಾಸ್‌, ಶ್ರೀಮತಿ ಸವಿತಾ ಗಣೇಶ್‌, ಕುಕ್ಕುವಾಡ ಮಂಜುನಾಥ್‌, ಸಣ್ಣತಮ್ಮಪ್ಪ ಬಾರ್ಕಿ, ಹರಪನಹಳ್ಳಿ ಹುಚ್ಚೆಂಗೆಪ್ಪ, ಜಿಗಳಿಯ ಜಿ. ಆನಂದಪ್ಪ, ಕೆ.ಆರ್‌. ರಂಗಪ್ಪ, ಜಿ.ಆರ್‌. ರಂಗಪ್ಪ, ಜಿ.ಆರ್‌. ನಾಗರಾಜ್‌, ಪತ್ರಕರ್ತ ಪ್ರಕಾಶ್‌, ಕೊಕ್ಕನೂರು ಸೋಮಶೇಖರ್‌, ತಣಿಗೆರೆಯ ಸನ್ನಿ, ಶ್ರೀಮತಿ ವಿಜಯಶ್ರೀ, ಗೌರಮ್ಮ, ಪಾರ್ವತಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಮುಖಂಡ ಹೊದಿಗೆರೆ ರಮೇಶ್‌ ಸ್ವಾಗತಿಸಿದರು. ಮಠದ ಧರ್ಮದರ್ಶಿ ಹರ್ತಿಕೋಟೆ ವೀರೇಂದ್ರಸಿಂಹ ನಿರೂಪಿಸಿದರು. ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ವಂದಿಸಿದರು.

error: Content is protected !!