ಹರಿಹರ : ಸಮಯ ಪಾಲಿಸದ ಸಿಬ್ಬಂದಿಗೆ ಪೌರಾಯುಕ್ತರ ತರಾಟೆ

ಹರಿಹರ : ಸಮಯ ಪಾಲಿಸದ ಸಿಬ್ಬಂದಿಗೆ ಪೌರಾಯುಕ್ತರ ತರಾಟೆ

ಹರಿಹರ, ಜೂ. 16 – ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ, ಸಾರ್ವಜನಿಕರನ್ನು ಅಲೆದಾಡಿಸುವ ನಗರಸಭೆ ಸಿಬ್ಬಂದಿಗಳನ್ನು ಪೌರಾಯುಕ್ತ ಬಸವರಾಜ್ ಐಗೂರ್ ತೀವ್ರವಾಗಿ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.

ಮಧ್ಯಾಹ್ನ 1.30ಕ್ಕೆ ಊಟಕ್ಕೆ ತೆರಳಿದ ಹಲವು ಸಿಬ್ಬಂದಿಗಳು 3 ಗಂಟೆ ಮೇಲಾದರೂ ಕಚೇರಿಗೆ ಬಂದಿರಲಿಲ್ಲ. ಮಧ್ಯಾಹ್ನ 3.30ಕ್ಕೆ ಕಂದಾಯ ಶಾಖೆಗೆ ಆಗಮಿಸಿದ ಬಸವರಾಜ್‌ ಕೇವಲ ಬೆರಳೆಣಿಕೆಯಷ್ಟು ಸಿಬ್ಬಂದಿಗಳ ಮಾತ್ರ ಕುಳಿತಿದ್ದು, ಉಳಿದಿದ್ದ ಖಾಲಿ ಕುರ್ಚಿಗಳನ್ನು ಕಂಡು ಆಕ್ರೋಶಗೊಂಡರು.

ಜನರು ತಮ್ಮ ಕೆಲಸಕ್ಕೆಂದು ನಗರಸಭೆಯ ಮುಂದೆ ಕಾದು ಕುಳಿತುಕೊಂಡಿದ್ದಾರೆ. ಊಟಕ್ಕೆಂದು ತೆರಳಿರುವ ಇವರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜಾರಾಗದೆ ಜನರಿಗೆ ಸತಾಯಿಸುವುದರಿಂದ ಸಾರ್ವಜನಿಕರು, ಜನಪ್ರತಿನಿಧಿಗಳು ನನಗೆ ಉಗಿಯುತ್ತಾರೆ, ಕನಿಷ್ಟ ಸಮಯ ಪ್ರಜ್ಞೆ ಇಲ್ಲವೇ ಇವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಸಾರ್ವಜನಿಕನೊಬ್ಬ ತನ್ನ ಖಾತೆ ಬದಲಾವಣೆ ಫೈಲು ಕಳೆದ 18 ದಿನಗಳಿಂದ ಟೇಬಲ್‌ನಿಂದ ಟೇಬಲ್ಲಿಗೆ ಬದಲಾಗುತ್ತಿದೆ, ಆದರೆ ಏನೂ ಕೆಲಸವಾಗುತ್ತಿಲ್ಲ, ಸಿಬ್ಬಂದಿಗಳು ನನ್ನಿಂದ ಹಣ ಪಡೆದಿದ್ದರೂ ನನ್ನ ಕೆಲಸ ಮಾಡಿಕೊಡುತ್ತಿಲ್ಲ ಎಂದು ಪೌರಾಯುಕ್ತರ ಮುಂದೆ ಅಳಲನ್ನು ತೋಡಿಕೊಂಡರು.

ಪೌರಾಯುಕ್ತರು ಕಚೇರಿಗೆ ಬಂದು ತರಾಟೆ ತೆಗೆದುಕೊಳ್ಳುತ್ತಿರುವ ವಿಷಯ ತಿಳಿದ ಸಿಬ್ಬಂದಿಗಳು ತಕ್ಷಣ ಕಚೇರಿಗೆ ದೌಡಾಯಿಸಿದರು. ತಾವು ಸಮಯಕ್ಕೆ ಸರಿಯಾಗಿ ಏಕೆ ಹಾಜರಾಗಿಲ್ಲ ಎಂಬುದರ ಬಗ್ಗೆ ಲಿಖಿತ ವಾಗಿ ಕಾರಣ ಕೊಡಬೇಕು, ಇಲ್ಲವಾದಲ್ಲಿ ನೋಟಿಸ್ ನೀಡಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಗಳಿಗೂ ಹಾಗೂ ಪಿಡಿ ಅವರಿಗೆ ದೂರು ನೀಡಬೇಕಾಗುತ್ತದೆ ಎಂದು ಪೌರಾಯುಕ್ತರು ಎಚ್ಚರಿಸಿದರು.

error: Content is protected !!