ನೆನೆಗುದಿಗೆ ಬಿದ್ದಿದ್ದ ಮಲ್ಲಶೆಟ್ಟಿ ದೊಡ್ಡ ಹಳ್ಳದ ಹೂಳಿಗೆ ಮುಕ್ತಿ

ನೆನೆಗುದಿಗೆ ಬಿದ್ದಿದ್ದ  ಮಲ್ಲಶೆಟ್ಟಿ ದೊಡ್ಡ ಹಳ್ಳದ ಹೂಳಿಗೆ ಮುಕ್ತಿ

 ದಾವಣಗೆರೆ, ಜೂ.16- ತಾಲ್ಲೂಕಿನ  ಆನಗೋಡು ಹೋಬಳಿ, ಹೊನ್ನೂರು ಗ್ರಾಮ ಪಂಚಾಯ್ತಿಗೆ ಒಳಪಡುವ ಮಲ್ಲಶೆಟ್ಟಿಹಳ್ಳಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ    ಹೊನ್ನೂರು ಕೆರೆಯವರೆಗೂ ದೊಡ್ಡ ಹಳ್ಳದ ಹೂಳು ತೆಗೆದು,  ನೆನೆಗುದಿಗೆ ಬಿದ್ದಿದ್ದ ಹಳ್ಳಕ್ಕೆ ಮುಕ್ತಿ ನೀಡಲಾಗಿದೆ ಎಂದು 22 ಕೆರೆ ಹೋರಾಟ ಸಮಿತಿ ಉಪಾಧ್ಯಕ್ಷ  ಮಲ್ಲಶೆಟ್ಟಿಹಳ್ಳಿ ಜಿ.ಎಸ್. ರೇವಣಸಿದ್ಧಪ್ಪ ದಳಪತಿ ತಿಳಿಸಿದ್ದಾರೆ.

ಈಗ ಒಂದು ತಿಂಗಳಿನಿಂದ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಮುಕ್ಕಾಲು ಭಾಗ ಕಾಮಗಾರಿ ಕೆಲಸ ನಡೆದಿದೆ. ಗೋಮಾಳ ಪಕ್ಕದಲ್ಲಿ ನೀರು ಹರಿಯುವ ಹಳ್ಳವಿದ್ದು, ಇನ್ನು ಕಾಲು ಭಾಗದಷ್ಟು ಕೆಲಸವಿರುತ್ತದೆ. ಕೆಲವು ಕಿಡಿಗೇಡಿಗಳು ನಡೆಯುತ್ತಿರುವ ಕಾಮಗಾರಿಯನ್ನು ಸಹಿಸಲಾರದೆ ಗೋಮಾಳ ಸಾಗುವಳಿ ಮಾಡುತ್ತಿರುವ ಇಬ್ಬರು ಹೆಣ್ಣು ಮಕ್ಕಳಿಗೆ ಕಾಮಗಾರಿಯನ್ನು ತಡೆಹಿಡಿಯುವಂತೆ ಪ್ರಚೋದನೆ ನೀಡಿರುತ್ತಾರೆ.  ಹೆಣ್ಣು ಮಕ್ಕಳಿಂದ ಆಗುತ್ತಿರುವ ತೊಂದರೆಯನ್ನು ನಿರ್ಲಕ್ಷಿಸಿ, ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಯು ಸುಸೂತ್ರವಾಗಿ ನಡೆಯುವಂತೆ ನಿಗಾ ವಹಿಸಬೇಕೆಂದು  ತಹಶೀಲ್ದಾರ್‍ರವರಿಗೂ ಮನವಿ ಸಲ್ಲಿಸಲಾಗಿದೆ. 

ಈ ಕಾಮಗಾರಿಯು ಹೊನ್ನೂರು ಕೆರೆಯವರೆಗೆ ನಡೆದರೆ, ನೀರು ಸರಾಗವಾಗಿ ಕೆರೆಗೆ ಸೇರುತ್ತದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಾದ ಎ.ಇ. ಪ್ರವೀಣ್, ಸಹಾಯಕ ಇಂಜಿನಿಯರ್ ರುದ್ರಮುನಿ ಕಾಮಗಾರಿಯ ಪರಿಶೀಲನೆಯಲ್ಲಿರುತ್ತಾರೆ.

 ಈ ಕಾಮಗಾರಿಯು ತಲೆತಲಾಂತರಗಳಿಂದ ನಡೆದೇ ಇರಲಿಲ್ಲ. ಈ ದೊಡ್ಡ ಹಳ್ಳಕ್ಕೆ ರಾಷ್ಟ್ರೀಯ ಹೆದ್ದಾರಿ ಹತ್ತಿರವಿದ್ದು, ಹಳ್ಳದ ನೀರು ಹೊನ್ನೂರು ಕೆರೆಗೆ ಸೇರಲು ಮುಕ್ತಿ ಸಿಕ್ಕಂತಾಗಿದೆ. ಇದಕ್ಕೆ ಸಂಬಂಧಪಟ್ಟ ಸಣ್ಣ ನೀರಾವರಿ, ಅಂತರ್ಜಲ ಇಲಾಖೆಯವರಿಗೂ ಹಾಗೂ ಮಾಜಿ ಶಾಸಕ ಪ್ರೊ.ಲಿಂಗಣ್ಣ ಅವರನ್ನು  ದಳಪತಿ ಅಭಿನಂದಿಸಿದ್ದಾರೆ.

error: Content is protected !!