ವಿದ್ಯಾರ್ಥಿ ಜೀವನದಲ್ಲಿ ರಾಜಕೀಯ ಬೆರೆಯಬಾರದು

ವಿದ್ಯಾರ್ಥಿ ಜೀವನದಲ್ಲಿ ರಾಜಕೀಯ ಬೆರೆಯಬಾರದು

ಹರಪನಹಳ್ಳಿ : ಸರ್ಕಾರಿ ಪಾಲಿಟೆಕ್ನಿಕ್‌ ಕಾರ್ಯಕ್ರಮದಲ್ಲಿ ಶಾಸಕಿ ಎಂ.ಪಿ.ಲತಾ ಕಿವಿಮಾತು

ಹರಪನಹಳ್ಳಿ, ಜೂ. 13- ವಿದ್ಯಾರ್ಥಿ ಜೀವನದಲ್ಲಿ ರಾಜಕೀಯ ಬೆರೆಯಬಾರದು. ರಾಜಕೀಯದಲ್ಲಿ ತೊಡಗಿದರೆ, ನಿಮ್ಮ ಭವಿಷ್ಯ ಹಾಳಾದಂತೆ ಎಂದು ಶಾಸಕರಾದ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಅನಂತನಹಳ್ಳಿ ಬಳಿ ಇರುವ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮಂಗಳವಾರ ನಡೆದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಉತ್ತಮ  ನಡವಳಿಕೆ ಇರಬೇಕು. ಕೆಲವೊಮ್ಮೆ ವೇಷ,  ಭೂಷಣಗಳಿಂದ, ಸ್ನೇಹಿತರಿಂದ  ದಾರಿ ತಪ್ಪಿದರೆ ತಂದೆ, ತಾಯಿ, ಗುರುಗಳಿಗೆ ಅಗೌರವವನ್ನು ತೊರಿದಂತಾಗುತ್ತದೆ. ಆದ್ದರಿಂದ ಗುರು-ಶಿಷ್ಯರ  ಸಂಬಂಧ ಉತ್ತಮವಾಗಿರಬೇಕೆಂದರು.

ವಿದ್ಯಾರ್ಥಿಗಳಲ್ಲಿ ಎಸ್ಸೆಸ್ಸೆಲ್ಸಿ ನಂತರ ಖಾಸಗಿ ಕಾಲೇಜುಗಳ ವ್ಯಾಮೋಹಕ್ಕೆ ಹೆಚ್ಚಾಗಿದ್ದು, ಖಾಸಗಿ ಶಾಲಾ-ಕಾಲೇಜುಗಳಿಗೆ ಸರಿಸಮನಾಗಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಉತ್ತಮ ಶಿಕ್ಷಕರು ಇದ್ದಾರೆ. ಪೋಷಕರು, ಮಕ್ಕಳು ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಬೇಕೆಂದು ಮನವಿ ಮಾಡಿದರು.

ಶಿಕ್ಷಣದಲ್ಲಿ ಹೆಚ್ಚು ಬದಲಾವಣೆಗಳಾಗುತ್ತಿದ್ದು, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಓದಿನ ಅಭ್ಯಾಸದ ಕಡೆಗೆ ಗಮನಹರಿಸಿದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ. ಸಿನಿಮಾ, ಧಾರಾವಾಹಿ ಹಾಗೂ ಮೊಬೈಲ್‌ನಿಂದ ದೂರವಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಬಳಿಕ ಕಾಲೇಜಿನ ವಸತಿ ನಿಲಯಗಳ ಕುರಿತು ಬಿಸಿಎಂ ಅಧಿಕಾರಿಗಳು ಹಾಗೂ ಪ್ರಾಚಾರ್ಯರೊಂದಿಗೆ ಚರ್ಚಿಸಿದ ಬಳಿಕ ಬಿಸಿಎಂ ಇಲಾಖೆಗೆ ಹಸ್ತಾಂತರಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಜಿ. ಪ್ರಕಾಶ್ ವಹಿಸಿದ್ದರು.

ಈ ಸಂದರ್ಭದಲ್ಲಿ ನೀಲಗುಂದ ಗ್ರಾ.ಪಂ. ಅಧ್ಯಕ್ಷೆ ಭೋವಿ ಹನುಮವ್ವ, ಸದಸ್ಯ ತಿಪ್ಪೇಶ್, ಕುಲಸಚಿವ ಎಸ್.ಎನ್. ರವಿಕುಮಾರ್, ಉಪನ್ಯಾಸಕರಾದ ಸಿ.ಪಿ. ಹರೀಶ, ಕೆ.ವಿ. ಶಿವರಾಜ್, ಸಿ.ಹೆಚ್. ರಶ್ಮಿ, ಮಂಜ್ಯಾನಾಯ್ಕ, ಟಿ.ಆರ್. ರಾಜು, ಹೆಚ್. ಅಭಿಷೇಕ್, ಡಿ. ಹರ್ಷ, ಎಂ.ವಿ. ಅನುಷಾ, ಅಜ್ಜೋಳ ಅಜಯ, ಮುಂಡರಾದ ಮಾಲತೇಶ್, ಮತ್ತೂರು ಬಸವರಾಜ್, ನಾಗರಾಜ್ ಸಾಸ್ವಿಹಳ್ಳಿ ಸೇರಿದಂತೆ, ಅನೇಕರು ಇದ್ದರು. 

error: Content is protected !!