ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಹಿಮಾ ಪಟೇಲ್ ಅಭಿಮತ
ದಾವಣಗೆರೆ, ಜೂ. 12- ಯಾವುದೇ ವೃತ್ತಿಯಾಗಲೀ ಸೇವೆಯ ಹಿನ್ನೆಲೆಯಲ್ಲಿ ಮಾಡಿದರೆ ಕರುಣೆ ತುಂಬಿರುವ ಕರ್ನಾಟಕ ಕಟ್ಟಲು ಸಾಧ್ಯ ಎಂದು ಮಾಜಿ ಶಾಸಕ ಮಹಿಮಾ ಪಟೇಲ್ ಅಭಿಪ್ರಾಯಪಟ್ಟರು.
ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಮಾಧ್ಯಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜಕಾರಣಿ, ವಕೀಲ, ವೈದ್ಯ, ಪತ್ರಕರ್ತ ಸೇರಿ ಎಲ್ಲರಲ್ಲೂ ಹಣದ ಭೂತ ಬೆನ್ನತ್ತಿದೆ. ಎಲ್ಲರೂ ಭದ್ರತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸೇವೆ ಹಿನ್ನೆಲೆಯಲ್ಲಿ ಕೆಲಸ ಮಾಡಿದರೆ ಅದು ರಾಜಕಾರಣವಲ್ಲ ಎಂಬ ಪರಿಸ್ಥಿತಿ ಇದೆ. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಸೇವಾ ಮನೋಭಾವ ಇದ್ದರೆ ಮರ್ಯಾದೆ ಸಿಗುತ್ತದೆ ಎಂದರು.
ಎಲ್ಲರೂ ಅವರ ಕುಟುಂಬ, ಜಾತಿಯ ಬಗ್ಗೆ ಆಲೋಚನೆ ಮಾಡುತ್ತಾರೆ. ಆದರೆ ಸಕಲ ಜೀವರಾಶಿಗಳಿಗೆ ಒಳಿತಾಗಲಿ ಎಂದು ಯೋಚನೆ ಮಾಡುವವರು ಕಡಿಮೆ. ಬಹುತೇಕರು ಬುದ್ಧಿವಾದ ಹೇಳಿಕೊಂಡು ದೈಹಿಕ ಶ್ರಮ ಪಡದೇ ಸುಲಭವಾಗಿ ಹಣ ಪಡೆಯುವ ಆಲೋಚನೆಯಲ್ಲಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಪತ್ರಕರ್ತರ ಕರ್ತವ್ಯಗಳು ಸರ್ವರ ಕಲ್ಯಾಣಕ್ಕೆ ಬಳಕೆಯಾಗಬೇಕು. ಶೇ. 90ರಷ್ಟು ಸಕಾರಾತ್ಮಕ ಕಾರ್ಯಗಳು ನಡೆದರೂ ಮಾಧ್ಯಮಗಳು ಶೇ. 10ರಷ್ಟು ಇರುವ ನಕಾರಾತ್ಮಕ ಕಾರ್ಯಗಳನ್ನೇ ವೈಭವೀಕರಿಸುತ್ತಿವೆ. ಹಗರಣ, ಅಪರಾಧ, ರಾಜಕೀಯ ವಾದ-ವಿವಾದಗಳಿಗೆ ಆದ್ಯತೆ ನೀಡುವ ಬದಲು ಒಳ್ಳೆಯ ಸುದ್ದಿಗಳಿಗೆ ಆದ್ಯತೆ ನೀಡಬೇಕು. ಇದು ಇಂದಿನ ಅಗತ್ಯ ಎಂದು ಸರ್ವೋದಯಕ್ಕಾಗಿ ಪತ್ರಕರ್ತರ ಕರ್ತವ್ಯಗಳು ವಿಷಯದ ಬಗ್ಗೆ ಮಾತನಾಡಿದ ಹಿರಿಯ ಪತ್ರಕರ್ತ ಸಿದ್ಧಯ್ಯ ಹಿರೇಮಠ ಹೇಳಿದರು.
ದೂರದರ್ಶನದ ಎ.ಎಲ್.ತಾರಾನಾಥ್, ಛಾಯಾಗ್ರಾಹಕ ಎಲ್. ವಿವೇಕ್ ಬದ್ದಿ, ಮುದ್ರಣ ವಿಭಾಗದ ಎಂ. ನಾಗರಾಜ್, ತಂತ್ರಜ್ಞರ ವಿಭಾಗದಲ್ಲಿ ಬುಡೇನ್ ಸಾಬ್ ಹಾಗೂ ಹಿರಿಯ ಪತ್ರಿಕಾ ವಿತರಕ ಎ.ಕೆ. ಶಿವಬಸಪ್ಪ ಅವರುಗಳಿಗೆ ಮಹಾತ್ಮ ಗಾಂಧಿ ಮಾಧ್ಯಮ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕರುಣಾ ಜೀವ ಕಲ್ಯಾಣ ಟ್ರಸ್ಟ್ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಕ್ಷ ಡಾ. ಹೆಚ್.ಎನ್. ಮಲ್ಲಿಕಾರ್ಜುನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.