ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೇ ಅಸ್ತ್ರ

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೇ ಅಸ್ತ್ರ

ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್

ದಾವಣಗೆರೆ, ಜೂ.12- ಮಕ್ಕಳು ಸಮಾಜದ ಆಸ್ತಿ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಶಿಕ್ಷಣದಿಂದಲೇ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ತಿಳಿಸಿದರು.

 ಸೋಮವಾರ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆ, ಜಿಲ್ಲಾ ವಕೀಲರ ಸಂಘ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಮಿಲ್ಲತ್ ಮಹಾವಿದ್ಯಾಲಯದಲ್ಲಿ ಜರುಗಿದ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರಿಗೂ ಸಾಮಾಜಿಕ ನ್ಯಾಯ, ಬಾಲ ಕಾರ್ಮಿಕ ಪದ್ದತಿ ಕೊನೆಗಾಣಲಿ ಎಂಬ ಘೋಷವಾಕ್ಯದೊಂದಿಗೆ ಕಾರ್ಮಿಕ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ವಿಶ್ವದ ಅನೇಕ ಕಡೆ ಬಾಲ ಕಾರ್ಮಿಕ ಪದ್ದತಿ ಜಾರಿಯಲ್ಲಿದೆ. 2000 ನೇ ಇಸವಿಯಲ್ಲಿ ಪ್ರಪಂಚದಲ್ಲಿ ಶೇ 16 ರಷ್ಟು ಬಾಲ ಕಾರ್ಮಿಕ ಪದ್ದತಿ ಇದ್ದು ಇದು 2020ರ ವೇಳೆಗೆ 9.6 ಕ್ಕೆ ಇಳಿಕೆಯಾಗಿದೆ.

ಕೇಂದ್ರ ಕಾರ್ಮಿಕ ಇಲಾಖೆ ಅಂಕಿ- ಅಂಶದನ್ವಯ ದೇಶದಲ್ಲಿ ಹೆಚ್ಚು ಬಾಲಕಾರ್ಮಿಕ ಪದ್ದತಿಯನ್ನು ಹೊಂದಿರುವ ರಾಜ್ಯ ಕರ್ನಾಟಕ ಮತ್ತು ನಂತರದ ಸ್ಥಾನ ತಮಿಳುನಾಡು ಆಗಿರುತ್ತದೆ. ಕೋವಿಡ್ ಪರಿಣಾಮ ಆರ್ಥಿಕ ಹಿಂಜರಿತದಿಂದಾಗಿ ಹಲವಾರು ಜನ ನಿರುದ್ಯೋಗಿಗಳಾಗಿದ್ದು ಇದರಿಂದಲೂ ಬಾಲ ಕಾರ್ಮಿಕರು ಹೆಚ್ಚಾಗಲು ಕಾರಣವಾಗಿದೆ. ಆದರೆ ಬಾಲ ಕಾರ್ಮಿಕ ಪದ್ದತಿ ಕಾನೂನಿನ್ವಯ ಅಪರಾಧವಾಗಿದ್ದು, ಇವರನ್ನು ದುಡಿಸಿಕೊಳ್ಳದೇ ಎಲ್ಲಾ ಮಕ್ಕಳಿಗೂ ಶಿಕ್ಷಣ ಹಾಗೂ ಜೀವಿಸುವ ನೆಲೆಯನ್ನು ಕಲ್ಪಿಸಿಕೊಡಬೇಕಾಗಿದೆ ಎಂದರು.

 ವಿದ್ಯಾರ್ಥಿಗಳು, ಅಧಿಕಾರಿಗಳು, ನೌಕರರು ಅಥವಾ ಸಾರ್ವಜನಿಕರಿಗೆ ಬಾಲ ಕಾರ್ಮಿಕರು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಬಹುದು ಎಂದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂ ಸಾಬ್ ಮಾತನಾಡಿ, ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ, ಆ ದೇಶ ಬಾಲ ಕಾರ್ಮಿಕತೆಯಿಂದ ಮುಕ್ತವಾಗಿರಬೇಕು. ಕರ್ನಾಟಕದಲ್ಲಿ ಪ್ರತಿ 10 ಮಕ್ಕಳಲ್ಲಿ ಒಬ್ಬರಂತೆ ಬಾಲಕಾರ್ಮಿಕರಿದ್ದಾರೆ. ಇತ್ತಿಚೀನ ದಿನಗಳಲ್ಲಿ ಈ ಪದ್ಧತಿ ಕಡಿಮೆಯಾಗಿದೆ. ಈ ಅನಿಷ್ಟ ಪದ್ಧತಿಯನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಇಲಾಖೆಗಳಲ್ಲದೇ ಸಮಾಜವು ಕೈ ಜೋಡಿಸಬೇಕು ಎಂದರು.

18 ವರ್ಷದೊಳಗಿನ ಎಲ್ಲಾ ಮಕ್ಕಳೇ, ಅವರಿಂದ ದುಡಿಸಿಕೊಳ್ಳುವುದು ಹಾಗೂ ಪೋಷಕರು  ಅವರನ್ನು ಬೆಂಬಲಿಸುವುದು ಶಿಕ್ಷಾರ್ಹ ಅಪರಾಧ, ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗದೇ ಶಿಕ್ಷಣದ ಕಡೆ ಗಮನಹರಿಸಬೇಕು ಎಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕ ಇ. ಎನ್. ಪ್ರಸನ್ನಕುಮಾರ, ಶಿಕ್ಷಣಾಧಿಕಾರಿ ಅಂಬಣ್ಣ, ಆರೋಗ್ಯ ಇಲಾಖೆಯ ಮುರುಳಿಧರ್, ಮಿಲ್ಲತ್ ಮಹಾವಿದ್ಯಾಲಯದ ಆಡಳಿತಾಧಿಕಾರಿ ಸೈಯದ್ ಆಲಿ ಉಪಸ್ಥಿತರಿದ್ದರು.

error: Content is protected !!