`ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಐತಿಹಾಸಿಕ ನಾಟಕ ಪ್ರದರ್ಶನದಲ್ಲಿ ಶಾಸಕ ಬಿ.ಪಿ. ಹರೀಶ್
ದಾವಣಗೆರೆ, ಜೂ. 11- ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಂಸ್ಕಾರ, ನಾಟಕ ಇವುಗಳು ದೇಶದ ಸಂಪತ್ತು, ಕಲಾವಿದರು ಈ ದೇಶದ ಆಸ್ತಿ. ಕಲೆ ಅದ್ಭುತವಾದುದು ಎಂದು ನೀಲಗುಂದ ಗುಡ್ಡದ ಸಂಸ್ಥಾನ ಜಂಗಮ ಪೀಠದ ಶ್ರೀ ಚನ್ನಬಸವ ಶಿವಯೋಗಿಗಳು ಹೇಳಿದರು.
ನಗರದ ಪದ್ಮಶ್ರೀ ಚಿಂದೋಡಿ ಕಲಾ ಕ್ಷೇತ್ರದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ವಿವಿಧ ನಾಟಕ ಕಲಾವಿದರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಇವರ ಸಂಯುಕ್ತಾ ಶ್ರಯದಲ್ಲಿ ಕಲಾವಿದರ ಸಂಘದ 9 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಇಂದು ಏರ್ಪಡಿಸಿದ್ದ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಐತಿಹಾಸಿಕ ನಾಟಕ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮನೆಗೆ ಒಂದು ಒಲೆ ಬೇಕು. ದೇಹಕ್ಕೆ ತಲೆ, ಪ್ರತಿಯೊಬ್ಬ ಮನುಷ್ಯನಿಗೆ ಕಲೆ ಇದ್ದಾಗ ಮಾತ್ರ ಆ ಮನುಷ್ಯನಿಗೆ ಬೆಲೆ ಬರುತ್ತದೆ. ಕಲೆಗೆ ಯಾವುದೇ ಶೀಲ, ಜಾತಿ ಇಲ್ಲ. ಕ್ಷೀಣಿಸುತ್ತಿರುವ ಕಲೆಯನ್ನು ಉಳಿಸಿ, ಬೆಳೆಸುವ ಜೊತೆಗೆ ಕಲಾವಿದರನ್ನು ಪ್ರೋತ್ಸಾಹಿಸುವ ಅವಶ್ಯವಿದೆ ಎಂದರು.
ನಾಟಕ ಕಲೆ ದೊಡ್ಡ ದೊಡ್ಡ ಶ್ರೀಮಂತರಿಗೆ ಒಲಿಯುವುದಿಲ್ಲ. ಇದು ಬಡವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಯಾವುದೇ ಕಲೆ ಇರಲಿ ಅದಕ್ಕೆ ಪ್ರೋತ್ಸಾಹ ಮುಖ್ಯ ಎಂದು ಹೇಳಿದರು.
ತಬಲಾ ನುಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ದೇಶ, ಧರ್ಮಕ್ಕಾಗಿ, ಸ್ವಾತಂತ್ರ್ಯ ಹೋರಾಟಗಾರರ ಪರಿಚಯವನ್ನು ನಾಟಕ, ರೂಪಗಳ ಮೂಲಕ ಮಾಡಿಕೊಡುತ್ತಿರುವುದು ಶ್ಲ್ಯಾಘ ನೀಯ. ಇನ್ನೂ ಹೆಚ್ಚು ಹೆಚ್ಚು ಕಾರ್ಯ ಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ ಎಂದರು. ಬೆಂಗಳೂರಿನಲ್ಲಿ ಕನ್ನಡ ಭಾಷೆ ಮಾತನಾಡುವವರು ಕಡಿಮೆಯಾಗಿ ಅನ್ಯಭಾಷಿಗರ ಸಂಖ್ಯೆ ಹೆಚ್ಚಾಗಿತ್ತು. ಇತ್ತೀಚಿನದ ದಿನಗಳಲ್ಲಿ ಕನ್ನಡಿಗರು ಕನ್ನಡವನ್ನು ಹೆಚ್ಚು ಬಳಸುವ ಮೂಲಕ ಅನ್ಯಭಾಷಿಗರಿಗೆ ಕನ್ನಡ ಕಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.
ಕನ್ನಡಿಗರು ಕನ್ನಡದ ಬಗ್ಗೆ ಅಭಿಮಾನ ವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಗಡಿನಾಡ ಕನ್ನಡಿಗರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ, ಕನ್ನಡದ ಬಗೆಗಿನ ಅಭಿಮಾನವನ್ನು ಮೂಡಿ ಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗ ಬೇಕಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹೆಚ್.ಜಿ. ಉಮೇಶ್ ಮಾತನಾಡಿ, ನೈಜ ಕಲಾವಿದರಿಗೆ ಮಾಸಾಶನ ಸಿಗುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಸಾಶನಕ್ಕೆ ಆಯ್ಕೆ ಮಾಡುವಾಗ ಅವರು ನಿಜವಾದ ಕಲಾವಿದರೇ, ಯಾವ ಕಲೆಯನ್ನು ಅಳವಡಿಸಿಕೊಂಡಿದ್ದಾರೆಂಬುದರ ಬಗ್ಗೆ ಪರಾಮರ್ಶಿಸಬೇಕು. ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದರು.
ರಂಗ ಕಲಾವಿದರ ಬದುಕು ದುಸ್ತರವಾಗಿದ್ದು, ಸರ್ಕಾರ ರಂಗ ಕಲಾವಿದರ ಬಗ್ಗೆ ಗಮನಹರಿಸಬೇಕು. ರಂಗಕಲಾವಿದರ ಕ್ಷೇಮಾಭಿವೃದ್ಧಿ ಕಲ್ಯಾಣ ಮಂಡಳಿ ರಚಿಸಿ, ಕಲಾವಿದರ ಬದುಕಿಗೆ ನೆರವಾಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಆವರಗೆರೆ ಸಮೀಪದ ಬಾಡಾ ಕ್ರಾಸ್ ಬಳಿ ಇರುವ ವೃತ್ತಕ್ಕೆ ಪದ್ಮಶ್ರೀ ಚಿಂದೋಡಿ ಲೀಲಾ ವೃತ್ತ ಎಂದೂ, ನಗರದ ಯಾವುದಾ ದರೊಂದು ರಸ್ತೆಗೆ ಖ್ಯಾತ ರಂಗಕರ್ಮಿ ಗುಬ್ಬಿ ವೀರಣ್ಣ ರಸ್ತೆ ಎಂದು ನಾಮಕರಣ ಮಾಡಬೇಕೆಂದು ಮನವಿ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಬಾಗಲಕೋಟೆ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸುಶೀಲ ಕುಮಾರ ಭೀಮಪ್ಪ ಬೆಳಗಲಿ ಮಾತನಾಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಸಿ.ಕೆ. ರುದ್ರಾಕ್ಷಿಬಾಯಿ ಪುಟ್ಟಾನಾಯ್ಕ, ಕೆಬಿಆರ್ ನಾಟಕ ಕಂಪನಿ ಮಾಲೀಕ ಸಿ.ಎಲ್. ಚಂದ್ರಧರ ಅವರ ಪುತ್ರ ಚಿಂದೋಡಿ ವೀರಶಂಕರ್, ಹಾಲೇಕಲ್ಲು ಸಿ. ವೀರಣ್ಣ, ನಿಟುವಳ್ಳಿ ಗೋಣಿಬಸಪ್ಪ, ಚನ್ನಯ್ಯಸ್ವಾಮಿ, ಗಣೇಶ್ ಗುಡಿಗುಡಿ, ಲಿಂಗರಾಜ ಗೌಡ್ರು ಮಾವಲಿ, ರವಿಪಾಟೀಲ್ ಮುಸ್ಟೂರು, ಪ್ರಕಾಶ್ ದಿಡಗೂರು, ಭರಮನಗೌಡ್ರು, ಶಿವಕುಮಾರ್ ಡಿ.ಶೆಟ್ಟರ್, ರುಕ್ಮಣಿ ಹೆಗಡೆ, ನೀಲಗುಂದ ಬಸವನಗೌಡ್ರು, ಪಿ.ಕೆ. ಖಾದರ್, ವಿಠೋಬರಾವ್ ಮತ್ತಿತರರು ಭಾಗವಹಿಸಿದ್ದರು.
ನಂತರ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಐತಿಹಾಸಿಕ ನಾಟಕ ಪ್ರದರ್ಶನಗೊಂಡಿತು.