ಉಚಿತ ಬಸ್ ಪ್ರಯಾಣದಲ್ಲಿ ಸಂಭ್ರಮಿಸಿದ ಮಹಿಳೆಯರು
ಹೂವಿನಹಡಗಲಿ, ಜೂ. 11- ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಡಗಲಿ ಬಸ್ ನಿಲ್ದಾಣದಲ್ಲಿ ಶಾಸಕ ಕೃಷ್ಣಾನಾಯ್ಕ ಅವರು ಶಕ್ತಿ ಯೋಜನೆಗೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನೂತನ ಶಕ್ತಿ ಯೋಜನೆ ಜಾರಿಗೆ ತಂದಿರುವುದು ನಿಜ. ಆದರೆ ಮೊದಲೇ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಯಾವುದೇ ರೀತಿಯ ಅನಾನುಕೂಲತೆ ಎದುರಾಗದಂತೆ ಕ್ರಮವಹಿಸುವುದು ಬಹಳ ಮುಖ್ಯ ಎಂದರು.
ಸದರಿ ಯೋಜನೆ ಉಚಿತವಾಗಿದ್ದು, ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಸಂಚರಿಸಬಹುದಾಗಿದೆ. ಈ ಸಂಭ್ರಮದ ಜೊತೆಗೆ ಸಾರಿಗೆ ನೌಕರರ ಕಷ್ಟಕಾರ್ಪಣ್ಯಗಳ ಬಗ್ಗೆ ಸಹ ಸರ್ಕಾರ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಕೆ ಶರಣಮ್ಮ, ಸಂವಿಧಾನ ಬದ್ದ ಹಕ್ಕುಗಳ ಅಡಿಯಲ್ಲಿ ಮಹಿಳೆಯರು ಇನ್ನೂ ವಿವಿಧ ರಂಗಗಳಲ್ಲಿ ತಮ್ಮ ಚಾಪನ್ನು ಮೂಡಿಸಬೇಕಾಗಿರುವುದರಿಂದ ಮಹಿಳೆಯರು ಈಗ ಶಕ್ತಿ ಯೋಜನೆ ಅಡಿಯಲ್ಲಿ ಸಾರಿಗೆ ಸಂಚಾರವನ್ನು ಕೈಗೊಳ್ಳಲು ಅವಕಾಶವಾಗಿದೆ. ಇದರ ಸದುಪಯೋಗವನ್ನ ಬಳಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಅಲ್ಲದೇ, ಪುರುಷರ ಮೇಲೆ ಅವಲಂಬಿತರಾಗದೇ ಮುಖ್ಯಮಂತ್ರಿಗಳಾದಿ ಯಾಗಿ ಶಾಸಕರನ್ನು ಮತ್ತೆ ಅಧಿಕಾರಿಗಳನ್ನು ತಾವೇ ಖುದ್ದು ಬಸ್ಸುಗಳಲ್ಲಿ ಹೋಗಿ ಕಂಡು ತಮ್ಮ ಅಹವಾಲು ಹೇಳಿಕೊಳ್ಳಲು ಅವಕಾಶ ಬಂದಿದೆ ಎಂದು ತಿಳಿಸಿದರು.