ಪೌರಕಾರ್ಮಿಕರೊಂದಿಗೆ ಕಸಗುಡಿಸಿದ ಜಗಳೂರು ಶಾಸಕ

ಪೌರಕಾರ್ಮಿಕರೊಂದಿಗೆ ಕಸಗುಡಿಸಿದ ಜಗಳೂರು ಶಾಸಕ

ಜಗಳೂರು, ಜೂ.11- ಪಟ್ಟಣದಲ್ಲಿ ಇಂದು ಬೆಳ್ಳಂಬೆಳಗ್ಗೆ 6:00ಗೆ ನೂತನ ಶಾಸಕ ಬಿ. ದೇವೇಂದ್ರಪ್ಪ ಅವರು ಸಂತೆ ಮೈದಾನದಲ್ಲಿ ಪೌರಕಾರ್ಮಿಕರೊಂದಿಗೆ ಕಸ ಗುಡಿಸುವ ಕಾರ್ಯದಲ್ಲಿ ತೊಡಗಿದ್ದರು. ಈ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದರು.

ಸಂತೆ ಮೈದಾನದಲ್ಲಿ ಬಿದ್ದಿದ್ದ ರಾಶಿ ರಾಶಿ ಕಸವನ್ನು ಪೌರಕಾರ್ಮಿಕರು ಮತ್ತು ಇತರೆ ಸಿಬ್ಬಂದಿಯೊಂದಿಗೆ ಸ್ವತಃ ಪೊರಕೆ ಹಿಡಿದು ಗುಡಿಸಿ, ಚಲಿಕೆಯಿಂದ ಪುಟ್ಟಿಗೆ ತುಂಬಿ, ಟ್ರ್ಯಾಕ್ಟರ್‌ಗೆ ಹಾಕುವ ಮೂಲಕ ಶಾಸಕರು ಪೌರಕಾರ್ಮಿಕರ ಕಾಯಕದಲ್ಲಿ ನೆರವಾದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಯಾರೂ ಕೂಡ ತಾವು ಮಾಡುವ ಕೆಲಸದಿಂದ ಸಣ್ಣವರು ಆಗುವುದಿಲ್ಲ. ಯಾವುದೇ ವೃತ್ತಿ ಇರಲಿ ಅವರಿಗೆ ವೃತ್ತಿ ಗೌರವ ನೀಡಬೇಕು. ಶಾಸಕ ಎಂದರೆ ಅದೇನು ದೊಡ್ಡ ಹುದ್ದೆಯಂತೆ ಭಾವಿಸಬಾರದು. ಪೌರಕಾರ್ಮಿಕರು ಸಹ ಪ್ರತಿದಿನ ಬೀದಿಯ ಕಸ ಸ್ವಚ್ಛಗೊಳಿಸುವ ಮೂಲಕ ತಮ್ಮ ವೃತ್ತಿಯನ್ನು ನಿರ್ವಹಿಸುತ್ತಾರೆ. ಅವರ ಕೆಲಸವನ್ನು ನೋಡಿ ನನ್ನ ಹೃದಯ ಮಿಡಿದಿದೆ. ಆದ್ದರಿಂದ ಅವರಿಗೆ ವೃತ್ತಿ ಗೌರವ ನೀಡಲು ಅವರೊಂದಿಗೆ ಕಾರ್ಯ ನಿರ್ವಹಿಸಿದೆ ಎಂದು ತಿಳಿಸಿದರು.

ತಿಂಗಳಿಗೆ ಒಮ್ಮೆಯಾದರೂ ಅವರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವೆ. ನನಗೆ ಬರುವ ಶಾಸಕರ ವೇತನದ ಮೊತ್ತವನ್ನು ಪೌರ ಕಾರ್ಮಿಕರ ಕಲ್ಯಾಣಕ್ಕೆ ಬಳಸುತ್ತೇನೆ ಎಂದರು.

ನಂತರ ಪಟ್ಟಣದ ಮರೇನಹಳ್ಳಿ ರಸ್ತೆಯ ಎರಡೂ ಬದಿಯಲ್ಲಿ ಕಟ್ಟಡ ಮತ್ತು ಇತರೆ ತ್ಯಾಜ್ಯ ರಾಶಿ ಬಿದ್ದಿರುವ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಇದು ಸಾರ್ವಜನಿಕರ ಆಸ್ತಿ ಎಲ್ಲೆಂದರಲ್ಲಿ ಈ ರೀತಿಯ ತ್ಯಾಜ್ಯವನ್ನು ಎಸೆಯುವುದು ಎಷ್ಟು ಸರಿ? ಸಾರ್ವಜನಿಕರಿಗೂ ಸಹ ಜವಾ ಬ್ದಾರಿ ಇದೆ. ಈ ರೀತಿ ರಸ್ತೆ ಬದಿ ತ್ಯಾಜ್ಯವನ್ನು ಎಸೆಯುವವರಿಗೆ ಸೂಕ್ತ ದಂಡ ವಿಧಿಸಲು ಕ್ರಮ ಕೈಗೊಳ್ಳಬೇಕೆಂದು ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಕೆರೆಗೆ ಕೊಳಚೆ ನೀರು  ಹರಿಯದಂತೆ ನಿರ್ಮಾಣವಾಗುತ್ತಿರುವ ರಾಜಕಾಲುವೆ ಸ್ಥಳಕ್ಕೆ ಭೇಟಿ ನೀಡಿದರು. ಪಟ್ಟಣದ ತ್ಯಾಜ್ಯ ನೀರು ಕೆರೆಗೆ ಸೇರದಂತೆ ಸುಮಾರು ಕೋಟಿ ರೂ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯವರು ರಾಜಕಾಲುವೆ ನಿರ್ಮಿಸುತ್ತಿದ್ದು, ಕಾಮಗಾರಿ ಸಮರ್ಪಕವಾಗಿಲ್ಲ ಮತ್ತು ಕಳಪೆಯಿಂದ ಕೂಡಿದೆ. ವೈಜ್ಞಾನಿಕವಾಗಿ ಯೋಜನೆ ತಯಾರಿಸಿಲ್ಲ ಎಂದು ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದರು.

ಅಲ್ಲಿಂದ ನೇರವಾಗಿ ಇಂದಿರಾ ಕ್ಯಾಂಟೀನ್‌ಗೆ ತೆರಳಿದ ಶಾಸಕ ದೇವೇಂದ್ರಪ್ಪ, ಪೌರಕಾರ್ಮಿಕರೊಂದಿಗೆ ಉಪಹಾರ ಸೇವಿಸಿ ದರು. ಇಂದಿರಾ ಕ್ಯಾಂಟೀನ್‌ನಲ್ಲಿ ನೀಡುತ್ತಿರುವ ಉಪಹಾರ ಮತ್ತು ಊಟ ತುಂಬಾ ಕಳಪೆಯಾಗಿದೆ ಎಂದು ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿವೆ. ಕ್ಯಾಂಟೀನ್ ಅವ್ಯವಸ್ಥೆಯಿಂದ ಕೂಡಿದೆ. ಕೆಲಸ ಮಾಡುವ ಕಾರ್ಮಿಕರಿಗೆ ಇಲ್ಲಿ ವೇತನ ಪಾವತಿ ಆಗಿಲ್ಲ. ಸಮರ್ಪಕವಾಗಿ ನಿರ್ವಹಿಸುವುದಾದರೆ ಮಾಡಿ, ಇಲ್ಲವೇ ಇಲ್ಲಿಂದ ಬಿಟ್ಟು ತೊಲಗಿ ಎಂದು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

ನಂತರ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕರು ಆಸ್ಪತ್ರೆಯ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು.

ಪಟ್ಟಣ ಸುತ್ತಾಡಿ ಸಾಮಾನ್ಯರ  ಸಮಸ್ಯೆಗಳನ್ನು  ಆಲಿಸಿ, ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸಿದರು.

ಶಾಸಕರೊಂದಿಗೆ, ಪಟ್ಟಣ ಪಂಚಾಯತ್ ಸದಸ್ಯರು, ಆರೋಗ್ಯ ನಿರೀಕ್ಷಕ ಕಿಫಾಯತ್ ಮತ್ತಿತರರು ಇದ್ದರು.

error: Content is protected !!