ನದಿಯಲ್ಲಿ ನೀರು ಕ್ಷೀಣ: ಕುಡಿಯುವ ನೀರಿಗೆ ಹಾಹಾಕಾರ ?

ನದಿಯಲ್ಲಿ ನೀರು ಕ್ಷೀಣ: ಕುಡಿಯುವ ನೀರಿಗೆ ಹಾಹಾಕಾರ ?

ಹರಿಹರ, ಜೂ. 11- ಈ ಬಾರಿ ಮುಂಗಾರು ಮಳೆ ವಿಳಂಬವಾಗಿರುವುದರಿಂದ   ನಗರದ ಜೀವನಾಡಿ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದು, ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚಾಗುವ ಸಾಧ್ಯತೆಯಿದೆ.

ಮುಂಗಾರು ಮಳೆ ಮೇ ತಿಂಗಳ ಮೊದಲ ವಾರದಲ್ಲಿ ಆರಂಭಗೊಂಡು ಡಿಸೆಂಬರ್ ಅಂತ್ಯದವರೆಗೂ ಮಳೆ ಆಗುವುದು ಹಿಂದಿನಿಂದಲೂ ವಾಡಿಕೆಯಾಗಿದೆ. ಜೂನ್ ಎರಡನೇ  ವಾರ  ಕಳೆಯುತ್ತಾ ಬಂದರೂ   ತಾಲ್ಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗಿರುವುದಿಲ್ಲ. ತಾಲ್ಲೂಕಿನ ಕೃಷಿ ಇಲಾಖೆಯ ಇತ್ತೀಚಿನ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ ಶೇ. 61 ರಷ್ಟು ಮಳೆಯ ಕೊರತೆ ಉಂಟಾಗಿದೆ ಎನ್ನಲಾಗಿದೆ. 

ಹಾಗಾಗಿ ಎಲ್ಲರ ಚಿತ್ತವು ಮುಗಿಲಿನತ್ತ ದೃಷ್ಟಿ ನೆಟ್ಟಿದ್ದು, ವರಣನ ಆಗಮನವನ್ನು ಕಾಯುತ್ತಿದ್ದಾರೆ. ಮುಂಗಾರು ಮಳೆ ಇಲ್ಲಿಯವರೆಗೂ ಆಗದೇ ಇರುವುದರಿಂದ, ನಗರದಲ್ಲಿರುವ ತುಂಗಭದ್ರಾ ನದಿಯ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗಿ ನದಿಯಲ್ಲಿ ಕಲುಷಿತ ನೀರು ಇರುವಂತೆ ಕಾಣುತ್ತದೆ. ಒಂದು ವೇಳೆ ಇದೇ ಕಲುಷಿತ ನೀರನ್ನು  ನಗರದ ಜನತೆಗೆ ಸರಬರಾಜು ಮಾಡಿದರೆ ರೋಗ ರುಜಿನಗಳು ಉಲ್ಬಣಗೊಳ್ಳುವ   ಸಾಧ್ಯತೆ ಹೆಚ್ಚಾಗಿ ಇರುತ್ತದೆ.

ಕಳೆದ ಸಾಲಿನಲ್ಲಿ ನಗರದಲ್ಲಿನ ರೈತರು ಹಲವು ಜಮೀನಿನಲ್ಲಿ ಬಿತ್ತನೆ ಕಾರ್ಯವನ್ನು ಆರಂಭಿಸಿದ್ದರು ಆದರೆ ಈ ಬಾರಿ ಕೃಷಿ ಚಟುವಟಿಕೆಗಳನ್ನು ಇನ್ನೂ ಆರಂಭಿಸದೇ ಇರುವುದನ್ನು ಕಾಣಬಹುದಾಗಿದೆ. ಹಾಗಾಗಿ  ಸಾರ್ವಜನಿಕರಿಗೆ ಮತ್ತು ಜಾನುವಾರು ಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ  ಅಧಿಕಾರಿಗಳು ಬಹಳ ಜವಾಬ್ದಾರಿಯುತವಾಗಿ ಕರ್ತವ್ಯ ನಿಭಾಯಿಸಬೇಕಾಗಿದೆ.


–  ಎಂ. ಚಿದಾನಂದ ಕಂಚಿಕೇರಿ

error: Content is protected !!