ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಹೋಬಳಿಯ ಏಳು ಗ್ರಾಮ ಪಂಚಾಯಿತಿ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ದೇವೇಂದ್ರಪ್ಪ ವಿಶ್ಲೇಷಣೆ
ಹರಪನಹಳ್ಳಿ, ಜೂ. 9 – ಸಾರ್ವಜನಿಕ ಕೆಲಸಗಳನ್ನು ವಿಳಂಬ ಮಾಡುವಾಗ ಧೋರಣೆ ಅನುಸರಿಸಿದರೆ ಭ್ರಷ್ಠಾಚಾರಕ್ಕೆ ಸಮವಾಗಲಿದ್ದು, ಆಡಳಿತ ಯಂತ್ರ ಕುಸಿಯದಂತೆ ಅಧಿಕಾರಿಗಳು ಜವಾಬ್ದಾರಿ ಯಿಂದ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಜಗಳೂರು ಶಾಸಕ ದೇವೇಂದ್ರಪ್ಪ ನಿರ್ದೇಶಿಸಿದರು.
ತಾಲ್ಲೂಕಿನ ಅರಸೀಕೆರೆ ಹೋಬಳಿಯ ಏಳು ಗ್ರಾಮ ಪಂಚಾಯಿತಿ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧಿಕಾರಿಗಳ ಮೇಲೆ ನನಗೆ ವಿಶ್ವಾಸವಿದೆ, ಸಾರ್ವಜನಿಕರ ಕೆಲಸಗಳಿಗೆ ಅಲೆದಾಡಿಸದೆ ಮಾಡಿಕೊಡಲು ಮುಕ್ತವಾಗಿ ಅವಕಾಶ ಮಾಡಿಕೊಡುವೆ. ಹರಪನಹಳ್ಳಿ, ಜಗಳೂರು, ದಾವಣಗೆರೆ ಮಧ್ಯೆ ಅರಸೀಕೆರೆ ಹೋಬಳಿ ವಿಭಿನ್ನವಾಗಿದ್ದು, ಇಲ್ಲಿನ ಅಭಿವೃದ್ಧಿ ಕೆಲಸ ಮಾಡಿಕೊಡಲು ಅಧಿಕಾರಿಗಳು ತಾರತಮ್ಯ ಮಾಡದೆ ಕೆಲಸ ಮಾಡಿಕೊಡಿ. ನಾವು, ನೀವು ಸೇರಿ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನರಿಗೆ ಹತ್ತಿರವಾಗೋಣ ಎಂದು ಹೇಳಿದರು.
ಕೃಷಿ ಅಧಿಕಾರಿಯಿಂದ ಏಳು ಪಂಚಾಯಿತಿಗೆ ಸಂಬಂಧಿಸಿದ ಕೃಷಿ ಮಾಹಿತಿ ಪಡೆದ ಶಾಸಕರು ತಡವಾಗಿ ಮುಂಗಾರು ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಚಾಲನೆ ದೊರೆತ್ತಿದೆ. ರೈತರಿಗೆ ಬೇಕಾದ ಬೀಜ, ಗೊಬ್ಬರ, ಔಷಧಿಗಳನ್ನು ಕೊರತೆಯಾಗದಂತೆ ಸಮರ್ಪಕವಾಗಿ ಪೂರೈಕೆ ಮಾಡಿ ಎಂದು ಕೃಷಿ ಅಧಿಕಾರಿ ಗೊಂದಿ ಮಂಜುನಾಥ ಇವರಿಗೆ ಸೂಚಿಸಿದರು.
ಅರಸೀಕೆರೆ, ಉಚ್ಚಂಗಿದುರ್ಗ ಭಾಗದಲ್ಲಿ ಹೆಚ್ಚಿನ ಗಣಿಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಧರಣೇಶ್, ಮಂಜುನಾಥ ನೀಡಿದ ಮಾಹಿತಿಯಂತೆ ಒಟ್ಟು 60 ಕಲ್ಲು ಕ್ರಷರ್ಗಳು ಇದ್ದು, 50 ಕ್ರಷರ್ಗಳು ಕೆಲಸ ನಿರ್ವಹಿಸುತ್ತಿವೆ, 10 ಸ್ಥಗಿತಗೊಂಡಿವೆ. ರಸ್ತೆ ನಿಯಮ ಮೀರಿ ಹೆಚ್ಚಿನ ಸಾಗಣೆ ಮಾಡುತ್ತಿದ್ದು, ಅಲ್ಲದೆ ಕಲ್ಲು ಗಣಿಗಾರಿಕೆಯಿಂದ ಸ್ಥಳೀಯ ಗ್ರಾಮೀಣ ರಸ್ತೆಗಳು ಹಾಳಾಗುತ್ತಿವೆ ಈ ಬಗ್ಗೆ ಗಮನ ಹರಿಸಿ.
– ದೇವೇಂದ್ರಪ್ಪ, ಶಾಸಕರು, ಜಗಳೂರು.
ಜೂನ್ನಲ್ಲಿ ಶಾಲಾ-ಕಾಲೇಜು ಆರಂಭವಾಗಿವೆ. ಮಳೆಯು ಬರುವ ಮುನ್ಸೂಚನೆ ಇದ್ದು ಶೌಚಾಲಯ, ಕುಡಿಯುವ ನೀರು, ಮೂಲಸೌಕರ್ಯ, ಕೊಠಡಿಗಳು ದುರಸ್ಥಿ ಇದ್ದರೆ ಅವುಗಳ ಬಗ್ಗೆ ಎಚ್ಚರಿಕೆ ವಹಿಸಿ, ತಾ.ಪಂ. ಇಓ ಮೂಲಕ ಗ್ರಾಪಂ ಪಿಡಿಓಗಳಿಗೆ ದುರಸ್ಥಿ ಮಾಡಿಕೊಡುವಂತೆ ಸೂಚಿಸಿದರು. ನಂತರ ಶಾಲೆಯಲ್ಲಿ ಕೊರತೆ ಇರುವ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆದು, ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಯಾವುದೇ ಮುಲಾಜಿಗೆ ಒಳಗಾಗದೆ ಪಾರದರ್ಶಕವಾಗಿ ನೇಮಕ ಮಾಡಿಕೊಳ್ಳಿ ಎಂದು ಬಿಇಓ ಬಸವರಾಜಪ್ಪನವರಿಗೆ ಹೇಳಿದರು.
ಅರಸೀಕೆರೆ ಭಾಗದಲ್ಲಿ ದೇವದಾಸಿ ಮಹಿಳೆಯರ ಸಂಖ್ಯೆ ಹೆಚ್ಚಿರುವ ಬಗ್ಗೆ ಶಾಸಕರ ಗಮನಕ್ಕೆ ಸಹಾಯಕ ನಿರ್ದೇಶಕರಾದ ರೇಣುಕಾದೇವಿ ಗಮನಕ್ಕೆ ತಂದಾಗ, ಶಾಸಕರು ವಸತಿ ನಿಲಯಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ನಿಲಯ ಮೇಲ್ವಿಚಾರಕರು, ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ ಎಂದರು. ದೇವದಾಸಿ ಮಹಿಳೆಯರಿಗೆ ಭೂಮಿ ಸೇರಿದಂತೆ ಮೂಲಸೌಕರ್ಯ ಒದಗಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಅರಸೀಕೆರೆ ವ್ಯಾಪ್ತಿಯಲ್ಲಿ 55 ಕಡೆಗಳಲ್ಲಿ ಜೆ.ಜೆ.ಎಂ.ಕಾಮಗಾರಿ ಪ್ರಗತಿಯಲ್ಲಿ 20 ಹಳ್ಳಿಗಳು ಬಾಕಿ ಇವೆ, ಬಹುಗ್ರಾಮ ಯೋಜನೆಯಲ್ಲಿ ಚಿಗಟೇರಿ ಮತ್ತು ಇತರೆ ಹಳ್ಳಿಗಳಲ್ಲಿ ಅರಸೀಕೆರೆ ವ್ಯಾಪ್ತಿಯ ಹಳ್ಳಿಗಳಿಗೂ ಕುಡಿಯುವ ನೀರನ್ನು ಒದಗಿಸುವ ಯೋಜನೆ ಗುತ್ತಿಗೆ ಹಂತದಲ್ಲಿದ್ದು, ಪೂರ್ಣಗೊಂಡ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದು ಯಾವುದೇ ರೀತಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ ಎಂದರು.
ಈ ಮಧ್ಯ ಬೆಸ್ಕಾಂ ಅಧಿಕಾರಿಗಳಾದ ಜಯ್ಯಪ್ಪ ಹಾಗೂ ವಿರುಪಾಕ್ಷಪ್ಪನವರು ಕೆರೆಗುಡಿಹಳ್ಳಿ ಗ್ರಾಮಕ್ಕೆ ಕಾನೂನು ನೋಡದೇ ನೀರನ್ನು ಒದಗಿಸಲು ಪ್ರಯತ್ನಿಸಿದರು. ಇದೇ ರೀತಿಯಾಗಿ ಎಲ್ಲಾ ಅಧಿಕಾರಿಗಳು ತುರ್ತು ಕೆಲಸಗಳಿಗೆ ಮುಂದಾಗಬೇಕು ಎಂದು ಅವರನ್ನು ಶ್ಲ್ಯಾಘಿಸಿದರು.
ಅರಣ್ಯ ಇಲಾಖೆ, ಮೀನುಗಾರಿಕೆ, ರೇಷ್ಮೆ, ಕೆಆರ್ಡಿಎಲ್, ಕೈಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿಯ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ತಹಶೀಲ್ದಾರ್ ಶಿವಕುಮಾರ ಬಿರಾದಾರ, ತಾಪಂ ಇಓ ಕೆ.ಆರ್.ಪ್ರಕಾಶ್, ಎಇಇ ಸತೀಶ ಪಾಟೀಲ್, ನಾಗಪ್ಪ, ಕೆ.ಮಲ್ಲಪ್ಪ, ಪಲ್ಲಾಗಟ್ಟಿ ಶೇಖರಪ್ಪ, ಸೇರಿದಂತೆ ಇತರರು ಇದ್ದರು.