ಕೃಷಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ
ದಾವಣಗೆರೆ, ಜೂ. 7- ತಾಲ್ಲೂಕಿನ ಆನಗೋಡು ಬಿತ್ತನೆ ಬೀಜ ಮಾರಾಟ ಕೇಂದ್ರಕ್ಕೆ ಬುಧವಾರ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ, ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಮಾಡಲಾಗುತ್ತಿದ್ದಾರೆಯೇ ಎಂಬುದರ ಪರಿಶೀಲನೆ ನಡೆಸಿದರು.
ಬಳಿಕ ನಡೆದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂಗಾರು ಆರಂಭವಾಗಿದ್ದು, ರೈತರಿಗೆ ಒಳ್ಳೆಯ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಒದಗಿಸಬೇಕು. ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ಸಮರ್ಪಕವಾಗಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಒದಗಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ನೀಡದಿದ್ದರೆ, ನನ್ನ ಗಮನಕ್ಕೆ ತಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ. ಮುಂಗಾರು ಸ್ವಲ್ಪ ವಿಳಂಬವಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಆರಂಭವಾಗಲಿದೆ. ಈಗಿನಿಂದಲೇ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ, ರಸಗೊಬ್ಬರು ವಿತರಿಸಿದರೆ, ಅವರು ದಾಸ್ತಾನು ಮಾಡಿಕೊಂಡು ಮಳೆ ಬಂದಾಗ ಬಿತ್ತನೆ ಮಾಡಲು ಅನುಕೂಲವಾಗಲಿದೆ. ಕೃಷಿ ಇಲಾಖೆ ಅಧಿಕಾರಿಗಳು ಇತ್ತ ಕಡೆ ಹೆಚ್ಚು ಗಮನ ಹರಿಸಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ಉಪನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಕೃಷಿ ಇಲಾಖೆ ಅಧಿಕಾರಿಗಳಾದ ಆರ್.ತಿಪ್ಪೇಸ್ವಾಮಿ, ಶ್ರೀಧರಮೂರ್ತಿ, ಶ್ರೀನಿವಾಸ್, ಸುರೇಶ್, ರೇಷ್ಮಾ, ಆನಗೋಡು ಗ್ರಾಪಂ ಅಧ್ಯಕ್ಷ ಮಾದಪ್ಪ, ಉಪಾಧ್ಯಕ್ಷ ನಸ್ರುದ್ದೀನ್, ಸದಸ್ಯರಾದ ಬಸವರಾಜ್, ಕರಿಬಸಪ್ಪ, ಸಾಧಿಕ್, ಕಂದನಕೋವಿ ದ್ಯಾಮನಗೌಡ, ಹನುಮಂತಪ್ಪ ಹೊನ್ನೂರು ಸೇರಿದಂತೆ ಗ್ರಾಮಸ್ಥರು, ರೈತರು ಭಾಗವಹಿಸಿದ್ದರು.