ದಾವಣಗೆರೆ, ಜೂ. 7 – ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆ `ನಮನ ಅಕಾಡೆಮಿ’ಯು ಹೊರ ದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದು ವಿಯೆಟ್ನಮ್ ದೇಶದ ವಿಯೋಗ ವರ್ಲ್ಡ್, ನಮನ ಅಕಾಡೆಮಿ ಹಾಗೂ ಅಷ್ಟಾಂಗ ವಿನ್ಯಾಸ ಇಂಟರ್ನ್ಯಾಷನಲ್ ಯೋಗ ಅಕಾಡೆಮಿ (ಏವಿಯ) ಸಹಭಾಗತ್ವದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಇದೇ ದಿನಾಂಕ 11 ರಂದು ಹೋ ಚಿ ಮೀನ್ ನಗರದಲ್ಲಿ ನಡೆಯುತ್ತಿರುವ `ದಿ ವಿಯೋಗ ವರ್ಲ್ಡ್ ಸ್ಟಾರ್ ಆರ್ಟಿಸ್ಟಿಕ್ ಯೋಗ ಅಂಡ್ ಇಂಟರ್ನ್ಯಾಷನಲ್ ಕಲ್ಚರಲ್ ಎಕ್ಸ್ಚೇಂಜ್’ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಮನ ಅಕಾಡೆಮಿಯ ಕಲಾವಿದರಾದ ವಿದುಷಿ ಶ್ರೀಮತಿ ಮಾಧವಿ ಡಿ.ಕೆ, ಪೂಜಾ ಆರ್ ಧಾಗೆ, ಪವನ್ ಕುಮಾರ್ ಎನ್ ಟಿ, ಮಂದಿರ ಎಂ, ರಕ್ಷಾ ಹೆಚ್ ಎಂ, ಅಕ್ಷರ ಎನ್, ವಸುಂದರ ಎನ್, ಗೌರಿ ಬಿ ಟಿ, ಹಂಸಿಕ ರವಿಕುಮಾರ್, ರುಹಿಕ ಸತೀಶ್ ಶೆಟ್ಟರ್’ `ವಚನ ನೃತ್ಯ, ಜನಪದ ನೃತ್ಯ, ಲಘು ಶಾಸ್ತ್ರೀಯ ನೃತ್ಯ ಹಾಗೂ ಶಾಸ್ತ್ರೀಯ ನೃತ್ಯಗಳನ್ನು’ ಪ್ರಸ್ತುತಪಡಿಸಲಿದ್ದಾರೆ. ಏವಿಯ ತಂಡದವರು `ದಾಂಡಿಯ ನೃತ್ಯ’ ಮಾಡಲಿದ್ದಾರೆ ಜೊತೆಗೆ ವಿವಿಧ ಯೋಗ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ದಾವಣಗೆರೆ, ಹುಬ್ಬಳ್ಳಿ, ಬೆಂಗಳೂರಿನಲ್ಲಿನ ಯೋಗಾಪಟುಗಳು ಹಾಗೂ ಕಲಾವಿದರೊಂದಿಗೆ ಇನ್ನೂ ಅನೇಕ ದೇಶದ ಯೋಗಾಪಟುಗಳು ಹಾಗೂ ಕಲಾವಿದರು ಈ ಅಂತರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಲಿದ್ದಾರೆ.
ಏವಿಯ ತಂಡದ `ಅಂತರರಾಷ್ಟ್ರೀಯ ಯೋಗ ರೆಫ್ರಿ’ ಹಾಗೂ ಯೋಗ ಕೋಚ್ ಆದ ಯೋಗಾಚಾರ್ಯ ತೀರ್ಥರಾಜ್ ಹೋಲೂರ್ ಹಾಗೂ ನಮನ ಅಕಾಡೆಮಿಯ ಗುರು ವಿದುಷಿ ಶ್ರೀಮತಿ ಡಿ. ಕೆ. ಮಾಧವಿ ಅವರು ಈ ಸ್ಪರ್ಧೆಗಳಲ್ಲಿ ಅಂತರರಾಷ್ಟ್ರೀಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಾಧವಿ ಅವರ ವಿದೇಶ ಪ್ರಯಾಣಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಡಾ. ಪ್ರಭಾ ಮಲ್ಲಿಕಾರ್ಜುನ್, ದಿನೇಶ್ ಕೆ. ಶೆಟ್ಟಿ ಅವರುಗಳು ಶುಭ ಹಾರೈಸಿದ್ದಾರೆ.