ದಾವಣಗೆರೆ, ಜೂ. 6- ಶಾಸಕ ಕೆ.ಎಸ್.ಬಸವಂತಪ್ಪ ಮಾಯಕೊಂಡ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೆಲವು ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿದಾಗ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು.
ಇದೇ ವೇಳೆ ಶಾಸಕ ಕೆ.ಎಸ್.ಬಸವಂತಪ್ಪ ಗೆಲುವಿಗೆ ಕಾರಣರಾದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಬೆಳಗ್ಗೆ ಕಾರಿಗನೂರು ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಬಸವಂತಪ್ಪ, ಗ್ರಾಮದ ಶತಾಯುಷಿ ಗಂಗಮ್ಮ ಅವರಿಗೆ ಅಭಿನಂದನೆ ಸಲ್ಲಿಸಿ, ಸನ್ಮಾನಿಸಿದರು.
ಕಾರಿಗನೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶಾಸಕರನ್ನು ಪೌರ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೇಮಾವತಿ ತಿಪ್ಪೇಸ್ವಾಮಿ, ಶರತ್ ಗೌಡ್ರು , ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್, ಯುವ ಕಾಂಗ್ರೆಸ್ ಅಧ್ಯಕ್ಷ ಓ. ಜಿ. ಕಿರಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೇಜಸ್ವಿ ಪಟೇಲ್, ಕಂದಾಯ ಇಲಾಖೆ ಅಧಿಕಾರಿಗಳಾದ ಬಸವರಾಜ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕತ್ತಲಗೆರೆ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಭತ್ತ ಕೊಯ್ಲು ಮಾಡಿ ಮಾರುಕಟ್ಟೆಗೆ ಸಾಗಿಸಲು ತಯಾರು ಮಾಡುತ್ತಿದ್ದ ರೈತನ ಬಳಿಗೆ ತೆರಳಿ, ಬೆಳೆದ ಭತ್ತ, ಈಗಿನ ದರದ ಬಗ್ಗೆ ಚರ್ಚಿಸಿದರು. ನಂತರ ಬೆಳಲಗೆರೆ ಡಿಪ್ಲೋಮಾ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆಸಿದರು.
ಬಳಿಕ ಬೆಳಲಗೆರೆ ಗ್ರಾ.ಪಂ. ಕಚೇರಿಗೆ ತೆರಳಿದ ಶಾಸಕ ಬಸವಂತಪ್ಪ ಅವರನ್ನು ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಸನ್ಮಾನಿಸಿದರು.