ರಾಣೇಬೆನ್ನೂರು : ರೈತರ ಸಾವಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಕಾರಣರಾಗಬಾರದು

ರಾಣೇಬೆನ್ನೂರು : ರೈತರ ಸಾವಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಕಾರಣರಾಗಬಾರದು

ಶಾಸಕ ಪ್ರಕಾಶ ಕೋಳಿವಾಡ

ರಾಣೇಬೆನ್ನೂರು, ಜೂ.4- ಭಾರತ ಕೃಷಿ ಪ್ರಧಾನ ರಾಷ್ಟ್ರ, ರೈತನಿಗೆ ಸಮಯಕ್ಕೆ ಸರಿಯಾಗಿ ಬೀಜ, ಗೊಬ್ಬರ ಒದಗಿಸಬೇಕು. ರೈತ ಬೆಳೆದರೆ ನಮ್ಮ ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ ಎಂದು ಇಲ್ಲಿನ ಕಮಲಾ ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಿಸಿ ಮಾತನಾಡಿದ ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಬೀಜದ ಗುಣಮಟ್ಟ ಮುಗ್ಧ ರೈತನಿಗೆ ತಿಳಿಯಲಾರದು. ವಿಜ್ಞಾನಿಗಳು, ಪರಿಣಿತ ಅಧಿಕಾರಿಗಳಿಗೆ ತಿಳಿಯುತ್ತದೆ.   ಕಳಪೆ ಬೀಜಗಳನ್ನು ಪತ್ತೆ ಹಚ್ಚಿ ಅವು ಮಾರುಕಟ್ಟೆಗೆ ಬರದಂತೆ ತಡೆಯಬೇಕು. ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದ ಶಾಸಕರು, ಕಳಪೆ ಬೀಜದ ವಂಚನೆಗೆ ಸಿಲುಕಿದ ರೈತನ ಸಾವಿಗೆ ನಾವೇ ಅಂದರೆ ಆಡಳಿತಗಾರರು, ಅಧಿಕಾರಿಗಳು ಕಾರಣರಾಗಬಾರದು ಎಂದು ಹೇಳಿದರು. 

ನನಗೆ ದುಡ್ಡಿನ ಅವಶ್ಯಕತೆ ಇಲ್ಲ. ನಾನು ರೈತ ಕುಟುಂಬದಿಂದ ಬಂದವನು. ನಾಲ್ಕಾರು ವರ್ಷ ನೂರಾರು ಎಕರೆ  ಜಮೀನಿನಲ್ಲಿ ರೈತನಾಗಿ ದುಡಿದಿದ್ದೇನೆ. ರೈತರ ಕಷ್ಟ-ಸುಖದ ಅರಿವು ನನಗಿದೆ. ನಾನು ಅಧಿಕಾರದಲ್ಲಿರುವವರೆಗೂ ರೈತರಿಗೆ ಅನ್ಯಾಯವಾಗಲು ಅವಕಾಶ ಕೊಡುವದಿಲ್ಲ. ಆಕಸ್ಮಿಕವಾಗಿ ಅಂತಹ ಘಟನೆಗಳು ನಡೆದರೆ ಅವರ ಮೇಲೆ ಕಠಿಣ ಕ್ರಮ ಜರುಗಿಸುತ್ತೇನೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಮೊದಲಿಗೆ ಸ್ವಾಗತಿಸಿದ ಕೃಷಿ ಅಧಿಕಾರಿ ಹಿತೇಂದ್ರ ಗೌಡಪ್ಪಳವರ ಹಾಗೂ ಚೇತನಾ ಪಾಟೀಲ ಅವರು ಮಾತನಾಡಿ, ರೈತರಿಗೆ ಈ ವರ್ಷಕ್ಕೆ ಅವಶ್ಯವಿರುವ ಬೀಜ ಮತ್ತು ಗೊಬ್ಬರ ದಾಸ್ತಾನು ಇದೆ. ಯಾವುದೇ ಕೊರತೆ ಆಗುವದಿಲ್ಲ. ರೈತರು ಮಾರುಕಟ್ಟೆಯಲ್ಲಿ ಖರೀದಿಸುವಾಗ ತಮ್ಮ ಆಧಾರ ಕಾರ್ಡ್ ಬಳಸಿಕೊಂಡು ನಿಗದಿತ ದರಪಟ್ಟಿಯಂತೆ ಹಣ ಸಂದಾಯ ಮಾಡಿ ರಶೀದಿ ಪಡೆದುಕೊಳ್ಳಿರಿ ಎಂದು ರೈತರಿಗೆ ಮನವಿ ಮಾಡಿದರು.

ರೈತ ಮುಖಂಡರಾದ ಗುರುನಾಥ ಕಂಬಳಿ, ರವೀಂದ್ರಗೌಡ ಪಾಟೀಲ, ಎಂ.ಎಚ್. ಪಾಟೀಲ, ಶಂಕ್ರಪ್ಪ ಬುರಡಿಕಟ್ಟಿ, ಈರಪ್ಪ ಕಡೂರ,  ಇಕ್ಬಾಲ್ ಸಾಬ್ ರಾಣೇಬೆನ್ನೂರು ಮತ್ತಿತರರಿದ್ದರು.

error: Content is protected !!