ಹರಿಹರ, ಮೇ 29 – ಹರಿಹರದ ಅಂಜುಮನ್ ಎ ಇಸ್ಲಾಮ್ ಸಂಸ್ಥೆಯ ಸಾಮಾನ್ಯ ಸಮಿತಿ ಸದಸ್ಯತ್ವಕ್ಕೆ ಅರ್ಜಿ ವಿತರಣೆ ಹಾಗೂ ಸ್ವೀಕಾರ ಪ್ರಕ್ರಿಯೆ ಮೇ 29ರಿಂದ ಆರಂಭಿಸ ಲಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಹಾಗೂ ಸಂಸ್ಥೆಯ ಹಂಗಾಮಿ ಸಮಿತಿಯ ಆಡಳಿತಾಧಿಕಾರಿ ಸೈಯದ್ ಮುಅಜಮ್ ಪಾಶಾ ಹೇಳಿದರು.
ನಗರದ ಅಂಜುಮನ್ ಸಂಸ್ಥೆ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಜಿ ವಿತರಣೆ ಮೇ 29ರಿಂದ ಜೂ.26ರವರೆಗೆ ಹಾಗೂ ಅರ್ಜಿ ಸ್ವೀಕಾರ ಮೇ 29ರಿಂದ ಜೂ.27ರೊಳಗೆ ನಡೆಯಲಿದೆ ಎಂದರು.
ಸದಸ್ಯರ ಕರಡು ಪ್ರತಿಯನ್ನು ಜು.15 ರಂದು ಪ್ರಕಟಿಸಲಾಗುವುದು. ಜು.17ರಿಂದ ಜು.21 ರವರೆಗೆ ಕರಡು ಪ್ರತಿಯ ಕುರಿತು ಲಿಖಿತ ತರಕಾರು, ಸಲಹೆ ನೀಡಬಹುದು. ಜು.24ರ ಬೆಳಿಗ್ಗೆ 11ಕ್ಕೆ ಕರಡು ಪ್ರತಿಯ ಕುರಿತು ಅಲಿಖಿತ ತಕರಾರು ಹೇಳಿಕೊಳ್ಳಬಹುದು. ಜು.31 ರಂದು ಸಾಮಾನ್ಯ ಸಮಿತಿ ಸದಸ್ಯರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದರು.
ಈ ಹಿಂದಿನ ಸಾಮಾನ್ಯ ಸಮಿತಿಯಲ್ಲಿ 7 ಸಾವಿರ ಸದಸ್ಯರಿದ್ದರು. ಈ ಸದಸ್ಯರಿಂದ ಆಯ್ಕೆಗೊಂಡ ಆಡಳಿತ ಮಂಡಳಿ ಸಮಿತಿ 3 ವರ್ಷ ಅವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ, ಹೊಸ ಸದಸ್ಯತ್ವಕ್ಕೆ ಆಹ್ವಾನ ಮಾಡಲಾಗಿದೆ. ನಂತರದಲ್ಲಿ ಹೊಸ ಆಡಳಿತ ಮಂಡಳಿಗೆ ಚುನಾವಣೆ ನಡೆಸಲಾಗುತ್ತದೆ ಎಂದರು.
ಹಿಂದಿನ ಆಡಳಿತ ಮಂಡಳಿಯ ಸಮಿತಿಯ ಅವಧಿಯಲ್ಲಿನ ಲೆಕ್ಕ-ಪತ್ರ ಸಲ್ಲಿಕೆಯಲ್ಲಿ ಆಗಿರುವ ಲೋಪ-ದೋಷಗಳ ಬಗ್ಗೆ ಆಡಿಟ್ ತಕರಾರು ವ್ಯಕ್ತವಾಗಿದ್ದು, ಸಂಬಂಧಿತರ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಹಂಗಾಮಿ ಸಮಿತಿಯ ಸದಸ್ಯರಾದ ಸೈಯದ್ ಮುನೀರ್ ಅಹ್ಮದ್ ಸಾಬ್, ಆಸಿಫ್ ಜುನೈದಿ, ಸೈಯದ್ ಇಮ್ತಿಯಾಜ್ ಕರೆಕಟ್ಟೆ, ರಸೂಲ್ ಖುರೇಶಿ, ಜಿಲ್ಲಾ ವಕ್ಫ್ ನಿರೀಕ್ಷಕ ಜಾಕಿರ್ ಹುಸೇನ್ ಇದ್ದರು.