ಗ್ಯಾರಂಟಿಗಳ ಜಾರಿಗೆ ಹೋರಾಟ ನಡೆಸಲು ಕೃತಜ್ಞತಾ ಸಮಾರಂಭದಲ್ಲಿ ಬಿಜೆಪಿ ಮುಖಂಡರ ಕರೆ
ದಾವಣಗೆರೆ, ಮೇ 27 – ಕಾಂಗ್ರೆಸ್ ಪಕ್ಷ ಚುನಾವಣಾ ಸಂದರ್ಭದಲ್ಲಿ ಜನರಿಗೆ ಮಂಕುಬೂದಿ ಎರಚುವ ಐದು ಗ್ಯಾರಂಟಿ ಗಳನ್ನು ನೀಡಿ ಗೆದ್ದಿದೆ. ಈಗ ಗ್ಯಾರಂಟಿಗಳಿಗಾಗಿ ಷರತ್ತು ವಿಧಿಸುವುದಾಗಿ ಹೇಳುತ್ತಿದೆ. ಇದರ ವಿರುದ್ಧ ಹೋರಾಟ ಮಾಡುವುದಾಗಿ ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯ ಕರ್ತರು ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಇಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಲವಾರು ಜನಪ್ರತಿನಿಧಿಗಳು ಹಾಗೂ ಮುಖಂಡರು, ಎಲ್ಲರಿಗೂ ಗ್ಯಾರಂಟಿ ಎಂದು ಹೇಳಿ ಗೆದ್ದಿರುವ ಕಾಂಗ್ರೆಸ್ ಈಗ ಜನರಿಗೆ ಮಂಕುಬೂದಿ ಎರಚುತ್ತಿದೆ. ಬಡವರಿಗೆ ಗ್ಯಾರಂಟಿಗಳನ್ನು ಕೊಡಿಸುವ ಕೆಲಸ ಮಾಡಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಎಲ್ಲರಿಗೂ ಉಚಿತ 200 ಯುನಿಟ್ ಕರೆಂಟ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಎಲ್ಲ ಪದವೀಧರ ನಿರುದ್ಯೋಗಿಗಳಿಗೂ ಭತ್ಯೆ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಈಗ 2022-23ರ ಸಾಲಿನ ಪದವೀಧರರಿಗೆ ಮಾತ್ರ ಭತ್ಯೆ ನೀಡುವುದಾಗಿ ಹೇಳಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೂರು ಕಾರಣಗಳಿಂದ ಬಿಜೆಪಿಗೆ ಸೋಲು
ಜಾತಿ ಸಮೀಕರಣ, ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳು ಹಾಗೂ ತಡ ವಾಗಿ ಅಭ್ಯರ್ಥಿಗಳ ಘೋಷಣೆ ಮಾಡಿದ ಕಾರಣದಿಂದ ಬಿಜೆಪಿಗೆ ಸೋಲು ಎದುರಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ. ಒಂದು ತಿಂಗಳು ಮೊದಲೇ ಅಭ್ಯರ್ಥಿ ಘೋಷಿಸಿದರೆ ಬಿಜೆಪಿಗೆ ಅನುಕೂಲವಾಗುತ್ತಿತ್ತು ಎಂದವರು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಸದಸ್ಯೆ ಉಮಾ ಪ್ರಕಾಶ್, ಲಂಬಾಣಿ ಸಮುದಾಯದವರು ಬಿಜೆಪಿಗೆ ಮತ ಚಲಾಯಿಸುವುದಿಲ್ಲ ಎಂದು ತಮ್ಮ ಬಳಿ ನೇರವಾಗಿ ತಿಳಿಸಿದ್ದರು. ಲಂಬಾಣಿ ಸಮುದಾಯದ ಈ ನಿಲುವಿನಿಂದ ಬಿಜೆಪಿ ಸಾಕಷ್ಟು ಮತ ಗಳನ್ನು ಕಳೆದುಕೊಂಡಿತು ಎಂದರು. ಲೋಕಿಕೆರೆ ನಾಗರಾಜ್ ಅವರು ಮಾತನಾಡಿ, ಒಳಮೀ ಸಲಾತಿ ಕಾರಣ ದಿಂದಾಗಿ ಕ್ಷೇತ್ರದಲ್ಲಿ 18-20 ಸಾವಿರ ಮತಗಳು ಕಡಿಮೆಯಾಗಿವೆ ಎಂದರು.
ನೋವು ಮರೆಯಲು ಗೆಲ್ಲಬೇಕು
ವಿಧಾನಸಭಾ ಚುನಾವಣೆಯಲ್ಲಿ ಸೋಲಾಗಿದೆ ಎಂದು ಎದೆಗುಂದಿಲ್ಲ. ಮುಂಬರುವ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ಸಂಸತ್ ಚುನಾವಣೆಯಲ್ಲಿ ಗೆಲ್ಲುವುದರ ಮೂಲಕ ಕಾರ್ಯಕರ್ತರು ವಿಧಾನಸಭಾ ಚುನಾವಣೆಯ ಸೋಲನ್ನು ಮರೆಯಲು ಸಾಧ್ಯವಾಗಲಿದೆ ಎಂದು ಲೋಕಿಕೆರೆ ನಾಗರಾಜ್ ಹೇಳಿದರು.
ರೈತ ಕುಟುಂಬದ ಸಾಮಾನ್ಯ ಕಾರ್ಯಕರ್ತನಾದ ನನಗೆ 70 ಸಾವಿರ ಮತಗಳು ದೊರೆತಿವೆ. ಈ ಹಿಂದಿನಂತೆ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವುದನ್ನು ಮುಂದುವರೆಸುತ್ತೇನೆ ಎಂದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳ ಬಗ್ಗೆ ಸುಳ್ಳು ಹೇಳಿದೆ. ಈ ಬಗ್ಗೆ ನಾವು ಹೋರಾಟ ಮಾಡಬೇಕು ಎಂದರು.
ಮಾಜಿ ದೂಡ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರ ಮಾಡುವಾಗ ಎಲ್ಲರಿಗೂ ಫ್ರೀ ಎಂದಿದ್ದಾರೆ. ಈಗ ಷರತ್ತು ಹಾಕಿದರೆ ಬಿಜೆಪಿ ಬಗ್ಗಲ್ಲ, ಹೋರಾಟ ಮಾಡಲಿದೆ ಎಂದರು.
ಪರಾಜಿತ ಅಭ್ಯರ್ಥಿ ಹಾಗೂ ಬಿಜೆಪಿ ರೈತ ಮೋರ್ಚ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ಚುನಾವಣೆಯಲ್ಲಿ ಎಲ್ಲರಿಗೂ ಗ್ಯಾರಂಟಿ ಎಂದು ಈಗ ಕಂಡೀಷನ್ ಅಪ್ಲೈ ಎನ್ನುವ ಮೂಲಕ ಕಾಂಗ್ರೆಸ್ ತಪ್ಪು ದಾರಿಗೆ ಎಳೆಯುತ್ತಿದೆ. ಬಿಜೆಪಿ ಈ ಬಗ್ಗೆ ಸಂಘಟಿತ ಹೋರಾಟ ನಡೆಸಲಿದೆ ಎಂದರು.
ದಾವಣಗೆರೆ ಉತ್ತರ ವಲಯ ಬಿಜೆಪಿ ಅಧ್ಯಕ್ಷ ಸಂಗನಗೌಡ್ರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ಉಪ ಮೇಯರ್ ಯಶೋಧ ಹೆಗ್ಗಪ್ಪ, ಬಿಜೆಪಿ ಮುಖಂಡರಾದ ದೇವರಮನಿ ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್, ಎ.ವೈ. ಪ್ರಕಾಶ್, ಎಲ್.ಎನ್. ಕಲ್ಲೇಶ್, ಶ್ರೀನಿವಾಸ ದಾಸಕರಿಯಪ್ಪ, ರೇವಣಸಿದ್ದಪ್ಪ, ಶಿವರಾಜ್ ಪಾಟೀಲ್, ಎನ್.ಎಂ. ಮುರುಗೇಶ್, ಬಾತಿ ವೀರೇಶ್, ಬಸವರಾಜ, ಹನುಮಂತಪ್ಪ, ಪಾಲಿಕೆ ಸದಸ್ಯರಾದ ಶಿಲ್ಪ ಜಯಪ್ರಕಾಶ್, ರೇಣುಕಾ ಶ್ರೀನಿವಾಸ್, ಗೌರಮ್ಮ ಗಿರೀಶ್, ರೇಖಾ ಸುರೇಶ್ ಉಪಸ್ಥಿತರಿದ್ದರು.
ಸರ್ವಮಂಗಳಮ್ಮ ಪ್ರಾರ್ಥಿಸಿದರೆ, ಎನ್. ರಾಜಶೇಖರ್ ಸ್ವಾಗತಿಸಿದರು.