ಭತ್ತದ ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ

ಭತ್ತದ ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ

ಮಲೇಬೆನ್ನೂರು, ಮೇ 26-  ಕುಂಬಳೂರು ಬಳಿಯ ಭದ್ರಾ 10ನೇ ಉಪ ನಾಲೆಯಲ್ಲಿನ ಸೇತುವೆಗೆ ಮುಳ್ಳಿನ ಗಿಡ, ಗಂಟೆ, ಸದೆ ಕಟ್ಟಿಕೊಂಡ ಪರಿಣಾಮ ನಾಲೆಯಲ್ಲಿ ನೀರು ಹರಿಯಲು ಅಡ್ಡಿಯಾಗಿ, ನಾಲೆ ನೀರು ರಸ್ತೆ ಮೇಲೆ ಹರಿದು ಭತ್ತದ ಗದ್ದೆಗೆ ನುಗ್ಗಿ ಸುಮಾರು 70 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಕೊಯ್ಲಿಗೆ ಬಂದ ಭತ್ತದ ಬೆಳೆ ಹಾನಿಗೀಡಾದ ಘಟನೆ ಗುರುವಾರ ನಡೆದಿದೆ. ಕೂಡಲೇ ರೈತರೆಲ್ಲ ಸೇರಿ ಟ್ರ್ಯಾಕ್ಟರ್ ಹಾಗೂ ಗೈ ಸಹಾಯದಿಂದ ಮುಳ್ಳಿನ ಗಿಡಕ್ಕೆ ಕಟ್ಟಿ ಎಳೆದು ತೆಗೆಯುವ ಮೂಲಕ ಭತ್ತದ ಬೆಳೆ ಉಳಿಸಿಕೊಳ್ಳಲು ಹರಸಾಹಸಪಟ್ಟರು.

ನೀರಾವರಿ ನಿಗಮದ ಎಂಜಿನಿಯರ್‌ಗಳು ಹಾಗೂ ಸೌಡಿಗಳು ಯಾರೂ ಸೆದೆ ತೆರವುಗೊಳಿಸಲು ಬರಲಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. 

ಮೇಲ್ಭಾಗದಲ್ಲಿ ರೈತರು ಭಾರೀ ಪ್ರಮಾಣದ ಸದ ಅಡ್ಡ ಹಾಕುವುದರಿಂದ ತೊಂದರೆಯಾಗುತ್ತದೆ. ಹೀಗಾಗದಂತೆ ಎಂಜಿನಿ ಯರ್‌ಗಳು ಹಾಗೂ ಸೌಡಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ರೈತರು ಒತ್ತಾಯಿಸಿದರು. ಶಿವಪ್ಪ ಕರಡಿ, ರಾಮಚಂದ್ರಪ್ಪ, ರಂಗನಾಥ್, ಕರಡಿ ಸೋಮಶೇಖರಪ್ಪ, ಹೊರಟ್ಟಿ ಮ೦ಜುನಾಥ್, ಶಿವಾಜಿ, ಜಿಗಳೇರ ಮತ್ತಿ ತರರು ಸದ ತೆರವು ಸಿದ್ದಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

ರೊಟೇಷನ್ ಪ್ರಕಾರ ಬುಧವಾರದಿಂದ ಈ ಉಪ ನಾಲೆಗೆ ನೀರು ಬಿಡಲಾಗಿತ್ತು. ನಾಲೆಯ ಮೇಲ್ಭಾಗದಲ್ಲಿ ನೀರು ಹಾಯಿಸುವವರು ಮುಳ್ಳಿನ ಗಿಡ ಹಾಗೂ ಸೆದೆಯನ್ನು ನಾಲೆಗೆ ಅಡ್ಡ ಹಾಕಿ ನೀರು ಹಾಯಿಸಿ ದ್ದಾರೆ. ನೀರು ಬಿಟ್ಟೊಡನೆ ನೀರಿನೊಂದಿಗೆ ಕೊಚ್ಚಿಕೊಂಡು ಬಂದ ಈ ಸೆದೆ ಕುಂಬಳೂರು ಬಳಿಯ ಕಿರು ಸೇತುವೆಗೆ ಕಟ್ಟಿಕೊಂಡಿದೆ. ಪರಿಣಾಮ ನಾಲೆ ನೀರು ರಸ್ತೆ ಹಾಗೂ ಪಕ್ಕದ ಗದ್ದೆಗಳಿಗೆ ನುಗ್ಗಿದೆ. ನೀರಿನ ರಭಸಕ್ಕೆ ಸೇತುವೆ ಪಕ್ಕದ ಭೂಮಿ, ರಸ್ತೆ, ಗದ್ದೆಯ ದಿಂಡುಗಳು ಕೊಚ್ಚಿಹೋಗಿವೆ. ಕೆಲವೆಡೆ ಭತ್ತದ ಬೆಳೆ ಬಿದ್ದಿರುವ ಜಾಗದಲ್ಲಿ ಬೆಳೆ ಹಾನಿಗೀಡಾಗಿದೆ ಎಂದು ರೈತರು ದೂರಿದ್ದಾರೆ.

ಈ ಭಾಗದಲ್ಲಿ ಭತ್ತದ ಬೆಳೆ ಕೊಯ್ದು ಮಾಡಲು ಸಿದ್ಧತೆ ನಡೆಸಿ, ನೀರು ಬಂದ್ ಮಾಡಿ, ಬಸಿ ನೀರು ಹೋಗಲು ಹೊಲದಲ್ಲಿ ಕಾಲುವೆಯನ್ನೂ ಮಾಡಿದ್ದರು. ಗದ್ದೆಯನ್ನು ಒಣಗಿಸಿದ್ದರು. ದಿಢೀರ್ ನಾಲೆ ನೀರು ನುಗ್ಗಿದ ಪರಿಣಾಮ ಇಲ್ಲಿನ ಗದ್ದೆಗಳ ಭತ್ತದ ಕೊಯ್ಲು ಮುಂದೂಡುವಂತಾಗಿದೆ ಎಂದು ರೈತರು ಗೋಳಾಡುತ್ತಿದ್ದಾರೆ.

error: Content is protected !!