ಹೊನ್ನಾಳಿ, ಮೇ 25- ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಂಜಾರ ಸಮುದಾಯದಿಂದ 4 ಜನ ಅಲ್ಪ ಮತಗಳ ಅಂತರದಿಂದ ಸೋತಿದ್ದು, ರುದ್ರಪ್ಪ ಲಮಾಣಿ ಅವರೊಬ್ಬರೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಚಿವರನ್ನಾಗಿ ಮಾಡುವಂತೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ಬಂಜಾರ ಸಮುದಾಯದ ಮುಖಂಡರು ಆಗ್ರಹಿಸಿದರು.
ಬುಧವಾರ ಹೊನ್ನಾಳಿ ಪ್ರವಾಸಿ ಮಂದಿರದಲ್ಲಿ ಅವಳಿ ತಾಲ್ಲೂಕುಗಳ ಬಂಜಾರ ಸಮುದಾಯದ ಮುಖಂಡರು ಕೆ.ಪಿ,ಸಿ.ಸಿ. ಸದಸ್ಯ ಹಾಗೂ ಹಿರಿಯ ಮುಖಂಡ ಡಾ.ಈಶ್ವರನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯಾದ್ಯಂತ ಬಂಜಾರ ಸಮುದಾಯ ಬಿಜೆಪಿಯ ಧೋರಣೆ ಖಂಡಿಸಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲಿಸಿದ್ದರಿಂದ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು, ಅಧಿಕಾರಕ್ಕೆ ಬರುವಂತಾಗಿದೆ. ಕಾಂಗ್ರೆಸ್‍ನ ಗೆಲುವಿನಲ್ಲಿ ಬಂಜಾರ ಸಮುದಾಯದ ಕೊಡುಗೆ ಅಪಾರವಾಗಿದ್ದು, ಈ ಹಿನ್ನೆಲೆಯಲ್ಲಿ ಬಂಜಾರ ಸಮುದಾಯಕ್ಕೆ ಸಚಿವ ಸ್ಥಾನ ನೀಡಲೇಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇದರೆ ಜೊತೆಗೆ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಅವರಿಗೆ ಕೂಡ ಸಚಿವ ಸ್ಥಾನ ನೀಡಬೇಕು ಎಂದರು.
ರುದ್ರಪ್ಪ ಲಮಾಣಿ ಈ ಹಿಂದೆ ಮುಜರಾಯಿ ಖಾತೆ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದು, ಜೊತೆಗೆ ಇಡೀ ಬಂಜಾರ ಸಮುದಾಯ ಪರಮ ಪವಿತ್ರ ಕ್ಷೇತ್ರವಾದ ಸಂತ ಸೇವಾಲಾಲ್ ಜನ್ಮ ಸ್ಥಳವಾದ ಸೂರಗೊಂಡನಕೊಪ್ಪದ ಸಮಗ್ರ ಅಭಿವೃದ್ದಿಯಲ್ಲಿ ಕೂಡ ಅವರ ಸೇವೆ ಅಪಾರವಾಗಿದೆ. ಈ ಬಾರಿ ರುದ್ರಪ್ಪ ಲಮಾಣಿಯವರಿಗೆ ಸಚಿವರಾಗಿ ಪ್ರಮುಖ ಖಾತೆಯನ್ನು ಸರ್ಕಾರ ಕೊಡಲೇಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಮುಖಂಡರಾದ ಅಂಜುನಾಯ್ಕ, ಶಿವರಾಂ ನಾಯ್ಕ, ಪೀರ್ಯಾನಾಯ್ಕ, ನ್ಯಾಮತಿ ತಾಲ್ಲೂಕು ಬಂಜಾರ ಸಂಘದ ಅಧ್ಯಕ್ಷ ಸೂರ್ಯನಾಯ್ಕ, ಪ್ರಭುದೇವ ನಾಯ್ಕ, ಸೋಮ್ಲಾನಾಯ್ಕ, ಕುಬೇರ ನಾಯ್ಕ ಸೇರಿದಂತೆ ಬಂಜಾರ ಸಮುದಾಯದ ಅನೇಕ ಮುಖಂಡರು ಉಪಸ್ಥಿತರಿದ್ದರು.