ಬಿಜೆಪಿ- ಕಾಂಗ್ರೆಸ್ ನಡುವೆ ನೇರ ಹಣಾಹಣಿ
ಹೂವಿನಹಡಗಲಿ, ಮೇ 10- ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಕ್ಷೇತ್ರದಾದ್ಯಂತ ಶಾಂತಿಯುತ ಮತದಾನವಾಗಿದೆ.
ಆರಂಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪರವಾಗಿರುವ ಮತದಾರರು ಮತ ಕೇಂದ್ರಕ್ಕೆ ತೆರಳಿ ಪೂಜೆಯನ್ನು ಸಲ್ಲಿಸಿದರು.
ಬೆಳಗ್ಗೆಯಿಂದ ಮಧ್ಯಾಹ್ನದವರಿಗೆ ಏರುಗತಿಯಲ್ಲಿ ಮತದಾನ ಪ್ರಕ್ರಿಯೆ ಶುರುವಾಗಿದ್ದು, ನಂತರ ಸ್ವಲ್ಪ ಕುಂದಿದಂತೆ ಕಂಡುಬಂದಿತು. ಭಾರೀ ಬಿಸಿಲಿನ ಝಳಕ್ಕೆ ಮತದಾರರು ಮನೆಯಿಂದ ಹೊರಬರದೆ ನಾಲ್ಕು ಗಂಟೆಯ ನಂತರ ಮತ ಕೇಂದ್ರಕ್ಕೆ ಭೇಟಿ ಕೊಡುತ್ತಿರುವುದು ಕಂಡುಬಂತು.
ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯಕ ತಮ್ಮ ಸ್ವಗ್ರಾಮ ಕೋಯಿಲಾರಗಟ್ಟಿ ತಾಂಡಾದ ಮತಗಟ್ಟೆಯಲ್ಲಿ ಮತವನ್ನು ಚಲಾಯಿಸಿದರು.
ಪಿ.ಟಿ. ಪರಮೇಶ್ವರ ನಾಯ್ಕ್ ಪಟ್ಟಣದ ಸೊಪ್ಪಿನ ಕಾಳಮ್ಮ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಸಹಜವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಕಂಡುಬಂದಿತು. ಆದರೆ ಜೆಡಿಎಸ್, ಕೆ.ಆರ್.ಪಿ.ಪಿ, ಕೆ.ಆರ್.ಎಸ್, ಎ.ಎ.ಪಿ. ಪಕ್ಷಗಳ ಅಭ್ಯರ್ಥಿ ಗಳು ಎಲ್ಲೂ ಕಂಡು ಬರಲಿಲ್ಲ.ಹಡಗಲಿ ಕ್ಷೇತ್ರದ ಪ್ರಥಮ ಮತಗಟ್ಟೆಯಾದ ಅಲ್ಲಿಪುರದಿಂದ ಮತದಾನ ಪ್ರಕ್ರಿಯೆ ಮುಂದುವರೆಯಿತು.
ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಿಗರು, ಕಾರ್ಯಕರ್ತರು ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ. 13ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಪ್ರೌಢದೇವರಾಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.