ಪಿ.ಬಿ. ರಸ್ತೆ ಅವೈಜ್ಞಾನಿಕ ನಿರ್ಮಾಣಕ್ಕೆ ಕನ್ನಡಿ ಹಿಡಿದ ಮಳೆ

ಪಿ.ಬಿ. ರಸ್ತೆ ಅವೈಜ್ಞಾನಿಕ ನಿರ್ಮಾಣಕ್ಕೆ ಕನ್ನಡಿ ಹಿಡಿದ ಮಳೆ

ಕೊಳಚೆ ನೀರಲ್ಲೂ ಸುಂದರವಾಗಿ ಕಾಣುವ ಕಟ್ಟಡದ ಪ್ರತಿಬಿಂಬ

ದಾವಣಗೆರೆ, ಮೇ 9- ಒಂದೆಡೆ ಚುನಾವಣಾ ಕಾವು, ಮತ್ತೊಂದೆಡೆ ಬಿರು ಬಿಸಿಲಿನ ಬೇಗೆ. ಇವೆರಡಕ್ಕೂ ತಂಪು ನೀಡಿದ್ದು ಮಂಗಳವಾರ ಮಧ್ಯಾಹ್ನ ಸುರಿದ ಮಳೆ.

ಒಂದೆಡೆ ಈ ಮಳೆ ಇಳೆಗೆ ತಂಪು ನೀಡಿತಾದರೂ, ದಾವ ಣಗೆರೆಯಲ್ಲಿ ನಡೆದ ಕೆಲವು ಅವೈಜ್ಞಾನಿಕ ರಸ್ತೆ ಕಾಮಗಾರಿ ಗಳಿಗೂ ಕನ್ನಡಿ ಹಿಡಿಯಿತು.

ಇದಕ್ಕೆ ಸಾಕ್ಷಿ ಎಂಬಂತೆ ನಗರದ ಪಿ.ಬಿ. ರಸ್ತೆಯಲ್ಲಿರುವ ಪೂಜಾ ಹೋಟೆಲ್ ಮುಂಭಾಗ ಮಧ್ಯಾಹ್ನ ಸುರಿದ ಮಳೆಯ ನೀರು ನಿಂತುಕೊಂಡಿತು. ಈ ನೀರಿನ ಮೇಲೆ ಸಂಚರಿಸುತ್ತಿದ್ದ ವಾಹನಗಳು ನೀರನ್ನು ಪಾದಚಾರಿಗಳಿಗೆ ಚಿಮ್ಮಿಸುತ್ತಾ ಹೋಗುತ್ತಿದ್ದವು.

ಅಲ್ಲಿ ನೋಡುತ್ತಿದ್ದ ಕೆಲವರಿಗೆ ಪೂಜಾ ಹೋಟೆಲ್ ಕೊಳಚೆ ನೀರಿನಲ್ಲಿ ಸುಂದರವಾಗಿ ಕಾಣುತ್ತಿತ್ತು. ಈ  ಸೌಂದರ್ಯ ಸವಿಯಬೇಕೋ? ಅಥವಾ ಕೊಳಚೆ ನೀರು ನಿಲ್ಲಲು ಕಾರಣವಾದ ಅವೈಜ್ಞಾನಿಕ ಕಾಮಗಾರಿ ನಡೆಸಿದ ಎಂಜಿನಿಯರ್‌ಗಳನ್ನು ಅಥವಾ ಜನಪ್ರತಿನಿಧಿಗಳನ್ನು ಬೈಯ್ಯಬೇಕೋ ಎಂಬ ದ್ವಂದ್ವ ನಿಲುವು ಅಲ್ಲಿದ್ದವರದ್ದಾಗಿತ್ತು.

ಅಂದಹಾಗೆ  `ನಿಂತ ಕೊಳೆ ನೀರಲ್ಲಿ ಸುಂದರ ಪ್ರತಿ ಬಿಂಬ.’ ಮತ್ತೆ ಮಳೆ ಬಂದರೆ ಸುಂದರ ಚಿತ್ರಗಳ ಸೆರೆ ಹಿಡಿಯಲು ಬನ್ನಿ’ ಎಂಬ ಶೀರ್ಷಿಕೆಯುಳ್ಳ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಅರ್ಧ ಗಂಟೆ ಸುರಿದ ಮಳೆಯ ನೀರು ಸರಾಗವಾಗಿ ಹರಿದು ಹೋಗದಂತೆ ಈ ರಸ್ತೆ ನಿರ್ಮಿಸಿದ ಮಹಾನುಭಾವ ನಿಗೆ ಸ್ಥಳೀಯ ಜನತೆ ಶಾಪ ಹಾಕುತ್ತಿದ್ದಾರೆ. ಮುಂದಾದರೂ ರಸ್ತೆಗಳು, ಚರಂಡಿಗಳು ವೈಜ್ಞಾನಿಕವಾಗಿ ನಿರ್ಮಾಣವಾಗಲಿ ಎಂಬುದು ದೇವನಗರಿಯ ನಾಗರಿಕರ ಸಲಹೆ.

error: Content is protected !!