ದಾವಣಗೆರೆ, ಮೇ 5- ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಂತರಾಜ್ಯ ಮನೆಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದು, 39.62 ಲಕ್ಷ ರೂ. ಮೌಲ್ಯದ 762 ಗ್ರಾಂ. ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮನೆಗೆ ನುಗ್ಗಿ ಬೀರುವಿನಲ್ಲಿದ್ದ 285 ಗ್ರಾಂ. ಬಂಗಾರದ ಆಭರಣಗಳು ಮತ್ತು 1.5 ಲಕ್ಷ ರೂ. ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವದನ್ನು ಪತ್ತೆ ಮಾಡಿ ಕೊಡಿ ಎಂದು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ ನಿರ್ದೇಶನದಲ್ಲಿ ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಹಾಗೂ ಎ.ಕೆ. ರುದ್ರೇಶ್ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆ ಸಿಪಿಐ ಯು.ಜೆ. ಶಶಿಧರ್ ನೇತೃತ್ವದ ತಂಡ ಆರೋಪಿತರಾದ ರಾಜು ಯಾನೆ ಪೋತರಾಜ್, ಸದ್ದಾಂ, ಆಟೋ ಚಾಲಕ ಕೂಡ್ಲಿಗಿ ತಾಲ್ಲೂಕು, ಮನು ಯಾನೆ ಮನ್ಸೂರ ಗಾರೆ ಕೆಲಸ ಕೊರಚರಹಟ್ಟಿ ನಿಟುವಳ್ಳಿ ದಾವಣಗೆರೆ, ಜಗದೀಶ, ಹೆಚ್. ಗಿರೀಶ್ ಗಾರೆ ಕೆಲಸ ಗಡಬನಹಳ್ಳಿ ಚಿಕ್ಕಮಗಳೂರು ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತರಿಂದ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಚಿಕ್ಕಮಗಳೂರು ಠಾಣೆಯಲ್ಲಿ 2 ಪ್ರಕರಣ, ಹಾಸನದಲ್ಲಿ 1 ಪ್ರಕರಣ, ಆಂಧ್ರಪ್ರದೇಶದ ಚಿತ್ತೂರು 2 ಹಾಗೂ ಟೌನ್ ಠಾಣೆಯಲ್ಲಿ ಒಂದು ಪ್ರಕರಣವನ್ನು ಪತ್ತೆ ಮಾಡಿ ಕಳ್ಳತನವಾದ 850 ಗ್ರಾಂ. ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲು ಬಾಕಿಯಿದ್ದು, ತನಿಖೆ ಮುಂದುವರೆದಿರುತ್ತದೆ.