ದಾವಣಗೆರೆ, ಮೇ 5- ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಹಾಗೂ ಪಠ್ಯಕ್ರಮ ಹೊರತುಪಡಿಸಿ ವಿಶೇಷ ಚಟುವಟಿಕೆಗಳಲ್ಲಿ ತಮ್ಮನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ಬೇಸಿಗೆ ಶಿಬಿರಗಳು ಅಗತ್ಯವಾಗಿವೆ ಎಂದು ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸತ್ಯನಾರಾಯಣ್ ಅಭಿಪ್ರಾಯಪಟ್ಟರು.
ಭಾರತ ಸೇವಾದಳ, ಜೈ ಭಾರತ್ ಟ್ರಸ್ಟ್, ಪ್ಲೈಯಿಂಗ್ ಬರ್ಡ್ ಡ್ಯಾನ್ಸ್ ಇನ್‌ಸ್ಟಿಟ್ಯೂಟ್, ಎಕೆ ಫೌಂಡೇಶನ್ ರವರ ಸಹಯೋಗದಲ್ಲಿ ಮಕ್ಕಳಿಗೆ ಹಮ್ಮಿಕೊಂಡಿದ್ದ ಒಂದು ತಿಂಗಳ ಮಕ್ಕಳ ಬೇಸಿಗೆ ಶಿಬಿರವನ್ನು ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸದೇ ಮೊಬೈಲ್ ಬಳಕೆ ಮಾಡಿಕೊಂಡು ದೈಹಿಕವಾಗಿ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಪ್ರತಿ ವರ್ಷ ಭಾರತ ಸೇವಾದಳ ಮತ್ತು ಫ್ಲೈಯಿಂಗ್ ಬರ್ಡ್ಸ್ ನೃತ್ಯ ಶಾಲೆ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜನೆ ಮಾಡಿ ಈಜು, ನೃತ್ಯ, ಕರಾಟೆ, ಯೋಗ, ಧ್ಯಾನ, ಪ್ರಾಣಾಯಾಮ, ನೈತಿಕ ಶಿಕ್ಷಣ, ಚಿತ್ರಕಲೆ, ನಾಯಕತ್ವ ಗುಣ, ದೇಶಾಭಿಮಾನ, ಭಾವೈಕ್ಯತೆ, ಸೇವಾ ಮನೋಭಾವನೆ ಮೂಡಿಸುವ ಶಿಕ್ಷಣವನ್ನು ಶಿಬಿರದಲ್ಲಿ ನೀಡುತ್ತದೆ ಎಂದು ತಿಳಿಸಿದರು.
ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯ ಟಿ.ನಾಗರಾಜ್, ಶಿಬಿರದ ಮಕ್ಕಳಿಗೆ ಶಾರೀರಿಕ ಯೋಗ, ನೈತಿಕ ಶಿಕ್ಷಣ ಪುಸ್ತಕ ಮತ್ತು ಗೀತೆಗಳ ಪುಸ್ತಕ, ಬ್ಯಾಡ್ಜ್ ಮಾಸ್ಕ್ ವಿತರಿಸಿದರು.
ಉದ್ಯಮಿ ಎಸ್.ಜಿ. ಉಳುವಯ್ಯ, ಸಂಪನ್ಮೂಲ ಶಿಕ್ಷಕಿ ನಾಗವೇಣಿ ಅವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾದಳ ಜಿಲ್ಲಾ ಅಧ್ಯಕ್ಷ ಪ್ರೊ. ಎಚ್. ಚನ್ನಪ್ಪ ಪಲ್ಲಾಗಟ್ಟೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಸೇವಾದಳ ಅಧ್ಯಕ್ಷ ಹಾಸಬಾವಿ ಕರಿಬಸಪ್ಪ, ಜಿಲ್ಲಾ ಸಮಿತಿ ಸದಸ್ಯರಾದ ರಮಣ ಲಾಲ್ ಸಂಘವಿ, ಕೆ.ಬಿ. ಪರಮೇಶ್ವರಪ್ಪ, ಜೈ ಭಾರತ್ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಪರಶುರಾಮ್ ಖಟಾವ್‌ಕರ್ ಉಪಸ್ಥಿತರಿದ್ದರು.
ಪರಶುರಾಮ್ ಖಟಾವ್‌ಕರ್ ಸ್ವಾಗತಿಸಿದರು. ವಲಯ ಸಂಘಟಕ ಅಣ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು, ಕೆ.ಟಿ.ಜಯಪ್ಪ ನಿರೂಪಿಸಿದರು. ಕೆ.ಪಿ. ಶ್ರೀಕಾಂತ್ ವಂದಿಸಿದರು.