ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಕಾಳಿಕಾದೇವಿಯ ನೂತನ ಶಿಲಾಮೂರ್ತಿಯ ಪುನರ್ ಪ್ರತಿಷ್ಠಾಪನೆ ಮತ್ತು ಅಷ್ಟಬಂಧ ಬ್ರಹ್ಮ ಕಲಶೋತ್ಸವ ಹಾಗೂ ಸಾಮೂಹಿಕ ಉಪನಯನ, ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಇಂದು ಮತ್ತು ನಾಳೆ ಜರುಗಲಿವೆ.
ಇಂದು ಬೆಳಿಗ್ಗೆ 5 ರಿಂದ 5.30ರವರೆಗೆ ವಿವಿಧ ಪೂಜೆಗಳ ನಂತರ ಕಾಳಿಕಾದೇವಿಯ ನೂತನ ಶಿಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಗೆ ಮಹಾಪೂರ್ಣಾಹುತಿ, ಅಗ್ನಿ ಪೂಜೆ, ಕಾಳಿಕಾದೇವಿ ಕಲಶ ಉದ್ಘಾಟನೆ, ಮಹಾಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, 10.30ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗುವುದು.
ನಂತರ ಅರೆ ಮಾದನಹಳ್ಳಿಯ ಸುಜ್ಞಾನ ಮಹಾಸಂಸ್ಥಾನ ಮಠದ ಶ್ರೀ ಶಿವ ಸುಜ್ಞಾನ ತೀರ್ಥ ಸ್ವಾಮೀಜಿ ಮತ್ತು ಯಾದಗಿರಿ ಜಿಲ್ಲೆಯ ಶ್ರೀ ಮದಾನೆಗೊಂದಿ ಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಸಂಜೆ 6.30 ರಿಂದ ಶ್ರೀ ಕಾಳಹಸ್ತೇಂದ್ರ ಶ್ರೀಗಳವರಿಂದ ಶ್ರೀ ಮೌನೇಶ್ವರ ಲೀಲಾ ವಿಲಾಸ ಪ್ರವಚನ ಇರುತ್ತದೆ. ನಾಳೆ ಶುಕ್ರವಾರ ಬೆಳಿಗ್ಗೆ 5.30ರಿಂದ 6.30 ರವರೆಗೆ ಸಲ್ಲುವ ಬ್ರಾಹ್ಮೀ ಲಗ್ನದಲ್ಲಿ ವಿಶ್ವಕರ್ಮ ವಟುಗಳ ಸಾಮೂಹಿಕ ಉಪನಯನ, ಜವಳ, ನಂತರ 9 ಗಂಟೆಗೆ ಸಾಮೂಹಿಕ ವಿವಾಹ ನಡೆಯಲಿದೆ. 10.30ಕ್ಕೆ ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ.