ಶಾಂತಿ-ಸಾಮರಸ್ಯದಿಂದ ಹಬ್ಬಗಳನ್ನು ಆಚರಿಸಬೇಕು

ಶಾಂತಿ-ಸಾಮರಸ್ಯದಿಂದ ಹಬ್ಬಗಳನ್ನು ಆಚರಿಸಬೇಕು

ಮಲೇಬೆನ್ನೂರು, ಏ. 17 – ರಂಜಾನ್‌ ಹಾಗೂ ಬಸವ ಜಯಂತಿ ಹಬ್ಬಗಳು ಹಿಂದೆ-ಮುಂದೆ ಬಂದಿರುವುದರಿಂದ ಈ ಎರಡೂ ಹಬ್ಬಗಳನ್ನೂ ಹಿಂದೂ-ಮುಸ್ಲಿಂ ಬಾಂಧವರು ಶಾಂತಿ, ಸಾಮರಸ್ಯದಿಂದ ಆಚರಿಸಿ ಎಂದು ಪಿಎಸ್‌ಐ ಪ್ರಭು ಕೆಳಗಿನಮನಿ ಮನವಿ ಮಾಡಿದರು.

ಸೋಮವಾರ ರಾತ್ರಿ ಮಲೇಬೆನ್ನೂರು ಪೊಲೀಸ್‌ ಠಾಣೆಯಲ್ಲಿ ರಂಜಾನ್‌ ಶಬೆ ಖಾದರ್‌ ಜಾಗರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಹಬ್ಬಗಳನ್ನು ಸರಳವಾಗಿ ಮತ್ತು ಶಾಂತಿಯುತವಾಗಿ ಆಚರಿಸಬೇಕು. ಮೈಕ್‌, ಡಿಜೆ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಕಡ್ಡಾಯ ವಾಗಿ ಅನುಮತಿ ಪಡೆಯಬೇಕೆಂದು ತಿಳಿಸಿದರು.

ಶಾಂತಿ ಕದಡುವಂತಹ ಯಾವುದೇ ಕೆಲಸಗಳನ್ನು ಮಾಡದಂತೆ ಎರಡೂ ಧರ್ಮದ ಯುವಕರಿಗೆ ಬುದ್ದಿ ಹೇಳಿ ಎಂದು ಪಿಎಸ್‌ಐ ಪ್ರಭು ಅವರು ಎರಡೂ ಸಮಾಜಗಳ ಮುಖಂಡರಿಗೆ ಸಲಹೆ ನೀಡಿದರು.

ಪುರಸಭೆ ಸದಸ್ಯ ಕೆ.ಜಿ. ಲೋಕೇಶ್‌ ಮಾತನಾಡಿ, ಪಟ್ಟಣದಲ್ಲಿ ನಾವೆಲ್ಲ ಮೊದಲಿ ನಿಂದಲೂ ಸಾಮರಸ್ಯದಿಂದ ಜೀವನ ನಡೆಸಿ ಕೊಂಡು ಬಂದಿದ್ದೇವೆ. ಕೆಲವು ಕಿಡಿಗೇಡುಗಳಿಂದಾಗಿ ಸಣ್ಣ-ಪುಟ್ಟ ಘಟನೆಗಳು ನಡೆದಿದ್ದವು. ಈಗ ಆಗದಂತೆ ಎಚ್ಚರ ವಹಿಸುತ್ತೇವೆ ಎಂದರು.

ಕಣ್ಣಾಳ್‌ ಧರ್ಮಣ್ಣ ಮಾತನಾಡಿದರು. ಪುರಸಭೆ ಸದಸ್ಯ ನಯಾಜ್‌ ಮಾತನಾಡಿ, ಇದೇ ದಿನಾಂಕ 22 ಅಥವಾ 23ಕ್ಕೆ ರಂಜಾನ್‌ ಹಬ್ಬ ಬರಲಿದ್ದು, ಹಬ್ಬದಂದು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತೇವೆ. ಈ ಬಾರಿ ಬಸವ ಜಯಂತಿ ಹಬ್ಬವೂ ಬಂದಿರುವುದರಿಂದ ಎಲ್ಲರೂ ಸೇರಿ ಸೌಹಾರ್ದದಿಂದ ಎರಡೂ ಹಬ್ಬಗಳನ್ನು ಆಚರಿಸೋಣ ಎಂದರು.

ಪುರಸಭೆ ಸದಸ್ಯರಾದ ಸಾಬೀರ್‌ ಅಲಿ, ಶಬ್ಬೀರ್‌ಖಾನ್‌, ದಾದಾಪೀರ್‌, ಎಂ.ಬಿ. ರುಸ್ತುಂ, ಮಾಜಿ ಸದಸ್ಯರಾದ ದಾದಾವಲಿ, ಮಳಸಗಿ ಶೇಖರಪ್ಪ, ಮುಖಂಡರಾದ ಕಡ್ಲೆಗೊಂದಿ ನಾಗರಾಜಪ್ಪ, ಸೈಯದ್‌ ಖಾಲೀದ್‌ ಮತ್ತಿತರರು ಸಭೆಯಲ್ಲಿದ್ದು ಸಲಹೆ-ಸಹಕಾರ ನೀಡಿದರು. ಪಿಎಸ್‌ಐ ಯುವರಾಜ್‌ ಕಂಬಳಿ ಸ್ವಾಗತಿಸಿದರು. 

error: Content is protected !!