ಜಗಳೂರು: 20 ರಂದು ಕಾಂಗ್ರೆಸ್ ಅಭ್ಯರ್ಥಿ ಬಿ. ದೇವೇಂದ್ರಪ್ಪ ನಾಮಪತ್ರ ಸಲ್ಲಿಕೆ

ಜಗಳೂರು: 20 ರಂದು ಕಾಂಗ್ರೆಸ್ ಅಭ್ಯರ್ಥಿ ಬಿ. ದೇವೇಂದ್ರಪ್ಪ ನಾಮಪತ್ರ ಸಲ್ಲಿಕೆ

ಜಗಳೂರು, ಏ.17- ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ  ಅಧಿಕೃತ ಅಭ್ಯರ್ಥಿಯಾಗಿ ಏ.20 ಗುರುವಾರ `ಬಿ’ ಫಾರಂನೊಂದಿಗೆ  ನಾಮಪತ್ರ ಸಲ್ಲಿಸುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣದ ಈಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯ ಕರ್ತರ ಶಕ್ತಿ ನನಗೆ ಆತ್ಮಸ್ಥೈರ್ಯ ತುಂಬಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ. ಡಾ. ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಕೊಡುಗೆಯಾಗಿರುವ ಪವಿತ್ರವಾದ ತಮ್ಮ  ಮತ ಕೇವಲ  ದೇವೇಂದ್ರಪ್ಪ ಗೆಲುವಿಗೆ ಮಾತ್ರವಲ್ಲ, ರಾಜ್ಯದಲ್ಲಿ ಬಡ ಶ್ರಮಿಕ ವರ್ಗಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಲು ಕಾಂಗ್ರೆಸ್ ಪಕ್ಷದ ಆಡಳಿತ ಸಾಕ್ಷಿಯಾಗಬೇಕು ಎಂದರು.

ನನ್ನನ್ನು ಕಾಂಗ್ರೆಸ್ ಪಕ್ಷ ಗುರುತಿಸಿ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಿದ್ದು, ಪಕ್ಷ ಸಿದ್ಧಾಂತಗಳಿಗೆ ಬದ್ದನಾಗಿರುವೆ. ಅವಕಾಶ ಕಲ್ಪಿಸಿದ ವರಿಷ್ಠರಿಗೆ ಚಿರ ಋಣಿಯಾಗಿರುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಎಸ್.ಟಿ. ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ, ಪಕ್ಷೇತರ ಅಭ್ಯರ್ಥಿ ಎಂದು ಘೋಷಿಸಿರುವ ಮಾಜಿ ಶಾಸಕ ಎಚ್.ಪಿ.ರಾಜೇಶ್ ಇಬ್ಬರೂ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು. ಅವರನ್ನು ಚುನಾವಣೆಯಲ್ಲಿ ಸಮರ್ಥವಾಗಿ ಎದುರಿಸಬೇಕಿದೆ. ದೇಶದಲ್ಲಿ ಬಿಜೆಪಿ ಪಕ್ಷದ ಆಡಳಿತಕ್ಕೆ ಮುಕ್ತಿ ನೀಡಬೇಕು. ಬೂತ್ ಮಟ್ಟದಿಂದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,  ಕೆಪಿಸಿಸಿ ತಾಲ್ಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್‌, ಎಸ್.ಮಂಜುನಾಥ್, ವಕೀಲ ಪ್ರಕಾಶ್, ಗುರುಸಿದ್ದಪ್ಪ, ಮಹೇಶ್, ಸಿ.ತಿಪ್ಪೇಸ್ವಾಮಿ, ಪಲ್ಲಾಗಟ್ಟೆ ಶೇಖರಪ್ಪ, ಸಾವಿತ್ರಮ್ಮ, ಓಬಣ್ಣ, ಗೋಡೆ ಪ್ರಕಾಶ್, ನಿಶಾನ್, ಅಹಮ್ಮದ್ ಅಲಿ, ಶಕೀಲ್ ಅಹಮ್ಮದ್ ಸೇರಿದಂತೆ ಇತರರು ಇದ್ದರು.

error: Content is protected !!