ಹರಿಹರ, ಏ. 17- ಕ್ಷೇತ್ರದ ಹಳ್ಳಿಗಳಲ್ಲಿ ಕಳೆದ ಮೂರು ದಿನಗಳಿಂದ ಪಾದಯಾತ್ರೆ ಮಾಡುವ ಮೂಲಕ ಇಂದು ನಾಮಪತ್ರವನ್ನು ಸಲ್ಲಿಸಿದ್ದು, ಇದೊಂದು ರೀತಿಯಲ್ಲಿ ಇತಿಹಾಸ ಸೃಷ್ಟಿಸಿದಂತಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ಐದು ವರ್ಷಗಳ ಅವಧಿಯಲ್ಲಿ ಶಾಸಕ ರಾಮಪ್ಪನವರು ಕ್ಷೇತ್ರದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ, ಜನರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದ ಕಾರಣ ಜನರು ಬದಲಾವಣೆ ಬಯಸಿದ್ದಾರೆ. ಸುಮಾರು 50 ಸಾವಿರ ಬಹುಮತದೊಂದಿಗೆ ತಮ್ಮನ್ನು ಜನರು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅದ್ಧೂರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದ ಶಿವಶಂಕರ್
ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅಪಾರ ಸಂಖ್ಯೆಯ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಉದಯ್ ಕುಮಾರ್ ಕುಂಬಾರ ಅವರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರವನ್ನು ಸಲ್ಲಿಸುವುದಕ್ಕಿಂತ ಮುಂಚಿತವಾಗಿ ಬನ್ನಿಕೋಡು ಗ್ರಾಮದಲ್ಲಿರುವ ತಮ್ಮ ತಂದೆ, ಮಾಜಿ ಸಚಿವ ಹೆಚ್. ಶಿವಪ್ಪನವರ ಸಮಾಧಿಗೆ ಪೂಜೆ ಸಲ್ಲಿಸಿದರು. ನಂತರ ಹರಿಹರ ನಗರದಲ್ಲಿರುವ ತಮ್ಮ ಮನೆ ದೇವರು ಶ್ರೀ ಹರಿಹರೇಶ್ವರ ಸ್ವಾಮಿ ದೇವರಿಗೆ, ನೂರ ಎಂಟು ಲಿಂಗೇಶ್ವರ ಸ್ವಾಮಿಗೆ, ನಾಡ್ ಬಂದ್ ಷಾ ದರ್ಗಾಕ್ಕೆ, ಗ್ರಾಮದೇವತೆ ಊರಮ್ಮ ದೇವಿಗೆ, ಪೇಟೆ ಆಂಜನೇಯ ಸ್ವಾಮಿ ಹಾಗೂ ನೀರಾವರಿ ಇಲಾಖೆಯಲ್ಲಿ ಇರುವ ಗಣೇಶ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದರು.
ಬನ್ನಿಕೋಡು ಗ್ರಾಮದಿಂದ ಶಿವನಹಳ್ಳಿ ಮಾರ್ಗವಾಗಿ ಬೈಪಾಸ್ ಮೂಲಕ ನಗರಕ್ಕೆ ಆಗಮಿಸಿ ನಗರದ ನೀರಾವರಿ ಇಲಾಖೆಯಿಂದ ಎತ್ತಿನ ಬಂಡಿಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೆರವಣಿಗೆಯಲ್ಲಿ ಸಮಾಳ, ಹಲಗಿ, ಡ್ರಮ್ ಸೆಟ್, ತೆನೆ ಹೊತ್ತ ಮಹಿಳೆಯರು, ಕಲಾ ತಂಡಗಳು ಭಾಗವಹಿಸಿದ್ದವು.ಮೆರವಣಿಗೆಯಲ್ಲಿ ಬೃಹತ್ ಹೂವಿನ ಹಾರದ ಜೊತೆಗೆ ಕುರಿ ಮರಿಯನ್ನು ಶಿವಶಂಕರ್ ಮೇಲೆ ಕೂರಿಸಿ ಮೆರವಣಿಗೆ ಮಾಡಿ ಅಭಿಮಾನಿಗಳು ಅಭಿಮಾನ ಮೆರೆದರು.
ಕ್ಷೇತ್ರದ ಎಲ್ಲಾ ವರ್ಗದ ಜನರು ಜೆಡಿಎಸ್ ಪಕ್ಷವನ್ನು ಬೆಂಬಲಿಸುವುದಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನನ್ನ ವಿರುದ್ಧ ಪೈಪೋಟಿ ನೀಡಿ ಗೆಲ್ಲುವಂತಹ ಅಭ್ಯರ್ಥಿ ಇನ್ನೂ ಸಿಗದೇ ಇರೋದಕ್ಕೆ ಕಾಂಗ್ರೆಸ್ ಪಕ್ಷವು ಅಭ್ಯರ್ಥಿಯನ್ನು ಹುಡುಕುವುದಕ್ಕೆ ಮುಂದಾಗಿದೆ ಎಂದರೆ ಒಂದು ರಾಷ್ಟ್ರೀಯ ಪಕ್ಷಕ್ಕೆ ಎಂತಹ ದುರ್ಗತಿ ಬಂದಿರಬಹುದು ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ಹೆಚ್.ಎಸ್. ಅರವಿಂದ್, ಚೇತನ ಹೆಚ್. ಶಿವಪ್ಪ, ಗ್ರಾಮಾಂತರ ಘಟಕದ ಅಧ್ಯಕ್ಷ ಹಳ್ಳಿಹಾಳ್ ಪರಮೇಶ್ವರಪ್ಪ, ನಗರ ಘಟಕದ ಅಧ್ಯಕ್ಷ ಹಬೀಬ್ ಉಲ್ಲಾ, ನಗರಸಭೆ ಸದಸ್ಯರಾದ ಗುತ್ತೂರು ಜಂಬಣ್ಣ, ನಿಂಬಕ್ಕ ಚಂದಾಪೂರ್, ಉಷಾ ಮಂಜುನಾಥ್, ದಿನೇಶ್ ಬಾಬು, ಲಕ್ಷ್ಮಿ ಮೋಹನ್, ಪಿ.ಎನ್. ವಿರೂಪಾಕ್ಷಪ್ಪ, ಆರ್.ಸಿ. ಜಾವೇದ್, ಬಿ. ಅಲ್ತಾಫ್, ರತ್ನ ಉಜ್ಜೇಶ್ ಮತ್ತು ಇತರರು ಉಪಸ್ಥಿತರಿದ್ದರು.